ಗುಣಮಟ್ಟದ ಹಾಲು ಉತ್ಪಾದನೆ ಮಾಡುವಂತೆ ಪ್ರೋತ್ಸಾಹಿಸಿ: ಎ.ಕೆ.ಮನುಮುತ್ತಪ್ಪ

shikshana karyakrama
Published on

ಮಡಿಕೇರಿ: ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ೨ನೇ ಸ್ಥಾನದಲ್ಲಿದ್ದು, ಅಮೂಲ್‌ನಂತಹ ಸಂಸ್ಥೆಗೆ ಪೈಪೋಟಿಯನ್ನು ನಂದಿನಿ ನೀಡುತ್ತಿದೆ. ಅಮೂಲ್ ರೀತಿಯಲ್ಲಿ ನಂದಿನಿ ಉತ್ಪನ್ನವು ಉತ್ತುಂಗಕ್ಕೇರಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಹೇಳಿದರು.


ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗೆ ಸಹಕಾರ ಸಂಘಗಳ ಮೇಲ್ವಿಚಾರಣೆ, ನಿರ್ವಹಣೆ, ಆಧುನಿಕ ಪಶುಪಾಲನೆ ಹಾಗೂ ಲೆಕ್ಕಪತ್ರ ನಿರ್ವಹಣೆ ಕುರಿತು ಇತ್ತೀಚೆಗೆ ನಡೆದ ವಿಶೇಷ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪ್ರತಿಯೊಬ್ಬ ರೈತರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವಂತೆ ಪ್ರೋತ್ಸಾಹಿಸಿ, ರೈತರಿಗೆ ತಿಳುವಳಿಕೆ ನೀಡಬೇಕು. ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ೨ನೇ ಸ್ಥಾನದಲ್ಲಿದೆ. ಅಮೂಲ್‌ನಂತಹ ಸಂಸ್ಥೆಗೆ ಪೈಪೋಟಿಯನ್ನು ನಂದಿನಿ ನೀಡುತ್ತಿದೆ. ಅಮೂಲ್ ರೀತಿಯಲ್ಲಿ ನಂದಿನಿ ಉತ್ಪನ್ನವು ಉತ್ತುಂಗಕ್ಕೇರಬೇಕು. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ತರವಾಗಿದೆ. ಅಲ್ಲದೇ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ವರ್ಷಂಪ್ರತೀ ಇಂತಹ ಶಿಕ್ಷಣ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ನೀಡುವ ಉಪಯುಕ್ತ ಸಲಹೆಗಳನ್ನು ಸ್ವೀಕರಿಸಿ ಅಳವಡಿಸಿಕೊಂಡು ಸಂಘವನ್ನು ಮುನ್ನಡೆಸಬೇಕೆಂದು ಕಿವಿ ಮಾತು ಹೇಳಿದ ಅವರು, ಕೊಡಗು ಜಿಲ್ಲೆಯನ್ನು ಕೇವಲ ಹಾಲಿನ ಮಾರಾಟಕ್ಕಾಗಿ ಮಾತ್ರ ಪರಿಗಣಿಸದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಘಗಳನ್ನು ಸ್ಥಾಪನೆ ಮಾಡಬೇಕಾಗಿ ತಿಳಿಸಿದರು.


ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಎನ್.ಎಂ.ಉಮೇಶ್ ಉತ್ತಪ್ಪ ಮಾತನಾಡಿ, ನಂದಿನಿ ಹಾಲು ಹಾಗೂ ಅದರ ಉತ್ಪನ್ನದ ಮಾರಾಟವನ್ನು ಪ್ರತಿ ಹಳ್ಳಿಗಳಿಗೂ ವಿಸ್ತರಿಸಬೇಕು. ವಿವಿಧ ರೀತಿಯ ಉತ್ಪನ್ನಗಳು ಕೊಡಗು ಜಿಲ್ಲೆಯಲ್ಲಿ ದೊರಕುವಂತಾಗಬೇಕು. ಪ್ರತಿಯೊಬ್ಬರು ಇಂತಹ ಶಿಕ್ಷಣ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.


ಸಂಘಗಳ ಮೇಲ್ವಿಚಾರಣೆ, ನಿರ್ವಹಣೆ, ಹಾಲಿನ ಗುಣಮಟ್ಟ ಮತ್ತು ಇತರೆ ವಿಷಯಗಳ ಕುರಿತು ಹಾಸನ ಹಾಲು ಒಕ್ಕೂಟದ ಶೇಖರಣೆ ವಿಭಾಗ ಪ್ರಧಾನ ವ್ಯವಸ್ಥಾಪಕ ಕೆ.ರೂಪೇಶ್ ಕುಮಾರ್ ಉಪನ್ಯಾಸ ನೀಡಿದರೆ, ಆಧುನಿಕ ಪಶುಪಾಲನೆ, ಪಶುಗಳ ಆರೋಗ್ಯ, ಮೇವಿನ ನೀಡುವಿಕೆ, ಕರುಗಳ ಪಾಲನೆ ಪೋಷಣೆ ವಿಷಯಗಳ ಕುರಿತು ಹಾಸನ ಹಾಲು ಒಕ್ಕೂಟದ ಪಶು ಆರೋಗ್ಯ ವಿಭಾಗದ ವ್ಯವಸ್ಥಾಪಕ ಡಾ॥ ಬಿ.ಎಲ್.ಪ್ರಸನ್ನ ಉಪನ್ಯಾಸ ನೀಡಿದರು. ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ, ನಿಧಿಗಳ ಹಂಚಿಕೆ ಕುರಿತು ಸಹಕಾರ ಸಂಘಗಳ ನಿವೃತ್ತ ಹಿರಿಯ ಲೆಕ್ಕಪರಿಶೋಧಕ ಡಿ.ಎನ್.ಚಂದ್ರಶೇಖರ್ ಉಪನ್ಯಾಸ ನೀಡಿದರೆ, ಹಾಲು ಉತ್ಪಾದನೆಯಲ್ಲಿ ಸಂಘಗಳ ಪಾತ್ರ ಹಾಗೂ ಶೇಖರಣೆಯಲ್ಲಿರುವ ನ್ಯೂನತೆಗಳ ಕುರಿತು ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ.ವೀಣಾರವರು ಉಪನ್ಯಾಸ ನೀಡಿದರು.


ವೇದಿಕೆಯಲ್ಲಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ.ರವಿ ಬಸಪ್ಪ, ಪಿ.ಬಿ.ಯತೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net