ದೇಶಿ ಕ್ರೀಡೆಗೆ ಉತ್ತೇಜನ ಕೊಡಿ

KDR kusti
ಕಡೂರು ತಾಲೂಕಿನ ಮಚ್ಚೇರಿ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಕುವೆಂಪು ವಿವಿ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ಆಟಗಾರರಿಗೆ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಶುಭ ಕೋರಿದರು. ಡಾ. ರಾಜಣ್ಣ, ಹೊನ್ನೇಗೌಡ, ಡಾ. ಮಂಜುಳಾ, ಈರಳ್ಳಿ ರಮೇಶ್, ತಿಮ್ಮರಾಜು, ಡಾ. ಎನ್.ಡಿ.ವಿರೂಪಾಕ್ಷ, ಮುರಳಿ ಇತರರಿದ್ದರು.
Published on

ಕಡೂರು: ವಿದೇಶಿ ಕ್ರೀಡೆಗಳ ಅಬ್ಬರದ ನಡುವೆ ಕಬಡ್ಡಿ ಸೇರಿದಂತೆ ದೇಶಿ ಕ್ರೀಡೆಗಳನ್ನು ಉತ್ತೇಜಿಸಬೇಕಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಮಚ್ಚೇರಿ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಶುಕ್ರವಾರ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕಬಡ್ಡಿ ಕೇವಲ ಕ್ರೀಡೆಯಲ್ಲ. ದೈಹಿಕ ಮತ್ತು ಮಾನಸಿಕ ಸ್ಥಿತಿ ಸಮತೋಲನದಲ್ಲಿಡುವ ಹಾಗೂ ಉತ್ಸಾಹ ಮೂಡಿಸುವ ಆಟ ಎಂದರು.
ಅರ್ಜುನ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಆಟಗಾರ ಹೊನ್ನೇಗೌಡ ಮಾತನಾಡಿ, ಸತತ ಪರಿಶ್ರಮ ಮತ್ತು ಗುರಿಯಿದ್ದರೆ ಯಶಸ್ಸು ಸಾಧ್ಯ. ಕಬಡ್ಡಿ ಅಪಾರ ದೈಹಿಕ ಶ್ರಮ ಬಯಸುವ ಕ್ರೀಡೆ. ಕ್ರೀಡೆಯಲ್ಲಿ ಯಶಸ್ಸು ಗಳಿಸಲು ಸತತ ಅಭ್ಯಾಸ ಮುಖ್ಯ. ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಯಾಗಿರಬೇಕು. ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ಕಬಡ್ಡಿ ಹಾಸ್ಟೆಲ್ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಯುವ ಸಬಲೀಕರಣ ಇಲಾಖೆ ಉಪನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತೀಕ ಕಬಡ್ಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಇದು ನಮ್ಮ ನೆಲದ ಸಂಸ್ಕೃತಿಗೆ ಸಂದ ಗೌರವ ಎಂದರು.
ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲ ಪ್ರಥಮ ದರ್ಜೆ ಕಾಲೇಜಿನ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎ.ರಾಜಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಿಮ್ಮರಾಜು, ಪುರಸಭೆ ಸದಸ್ಯ ಈರಳ್ಳಿ ರಮೇಶ್, ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ.ವಿರೂಪಾಕ್ಷ, ಉಪನ್ಯಾಸಕ ತಿಮ್ಮೇಗೌಡ, ಮುರಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net