

ವಿಜ
ವಿಜಯವಾಣಿ ಸುದ್ದಿಜಾಲ ಧಾರವಾಡ
ಜಾನಪದ ಕಲಾವಿದರಿಗೆ ಹೆಚ್ಚಿನ ಮಾಸಾಶನ ನೀಡುವಂತೆ ಮಾಡಿರುವ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿ ಭರವಸೆ ನೀಡಿದ್ದಾರೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.
ನಗರದ ರಂಗಾರಣದ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಾನಪದ ವೈಭವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆ ಮತ್ತು ಕಲಾವಿದರ ರಕ್ಷಣೆಯ ಧ್ಯೇಯದೊಂದಿಗೆ ಆರಂಭವಾದ ಪರಿಷತ್ತು 8 ವರ್ಷಗಳಲ್ಲಿ 30 ಜಿಲ್ಲಾ ಘಟಕ, 200 ತಾಲೂಕು ಘಟಕ, 1000ಕ್ಕೂ ಹೆಚ್ಚು ಗ್ರಾಮ ಘಟಕಗಳಲ್ಲದೇ 5 ಗಡಿ ಮತ್ತು ಹೊರನಾಡಿನ ಘಟಕ ಹೊಂದಿದೆ. ಬರುವ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲೂ ಮೂಲ ಜಾನಪದ ಕಲಾವಿದರನ್ನು ಗುರುತಿಸಿ ಉತ್ತೇಜನ ನೀಡಲಾಗುವುದು ಎಂದರು.
ಪಾರ್ವತೆವ್ವ ಹೊಂಗಲ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು ಮಹಿಳಾ ಶಕ್ತಿ ಮುಖ್ಯ. ಮಹಿಳೆಯರೇ ಜಾನಪದ ಉಳಿಸಿಕೊಂಡು ಬಂದಿದ್ದು, ಜನಪದ ಸಂಸ್ಕೃತಿ ಉಳಿವಿಗೆಗೂ ಮಹಿಳೆಯರೇ ಮುಂದಾಳತ್ವ ವಹಿಸಬೇಕು ಎಂದರು.
ಡಾ.ರಾಮು ಮೂಲಗಿ ಮಾತನಾಡಿ, ಮೂಲ ಜಾನಪದ ಯಾವುದು ಎಂಬುದನ್ನು ಸ್ಪಷ್ಟ ಪಡಿಸಬೇಕಿದೆ. ಸರ್ಕಾರ ಈ ಕುರಿತು ಅಧ್ಯಯನ ನಡೆಸಲು ಪ್ರೋತ್ಸಾಹಿಸಬೇಕಲ್ಲದೆ, ಜಾನಪದ ಹೆಸರಿನಲ್ಲಿ ಯಾವುದೋ ಅಶ್ಲೀಲ ಹಾಡುಗಳನ್ನೇ ಜಾನಪದ ಎಂದು ತಿಳಿಯುತ್ತಿರುವುದು ಖೇದನೀಯ ಎಂದರು.
ಡಾ. ಲಿಂಗರಾಜ ಅಂಗಡಿ, ಶಾಂತಣ್ಣ ಕಡಿವಾಲ ಮಾತನಾಡಿದರು. ಈರಪ್ಪ ಎಮ್ಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ರಂಗ ನಟ ಗದಿಗೆಯ್ಯ ಹಿರೇಮಠ ಹಾಗೂ ಸಮಾಜ ಸೇವಕ ವಿ.ಜಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಆರ್.ಎಂ. ಗೋಗೇರಿ ಸ್ವಾಗತಿಸಿದರು. ಪ್ರೊ. ಕೆ.ಎಸ್. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತ್ರಾ ಭೂಸನೂರಮಠ ನಿರೂಪಿಸಿದರು. ಮಾಧವಿ ಕುಲಕರ್ಣಿ ವಂದಿಸಿದರು.