ಪಠ್ಯದ ಜತೆಗಿರಲಿ ಪಠ್ಯೇತರ ಚಟುವಟಿಕೆಗೆ ಉತ್ತೇಜನ

Book Relese
Published on

ಹೊನ್ನಾವರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗಿಸಬೇಕು. ಬೋಧನೆಯ ಜತೆಗೆ ನವನವೀನ ಚಟುವಟಿಕೆ ನಡೆಸುವ ಮೂಲಕ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಸೇರುವಂತೆ ಮಾಡಬೇಕು ಎಂದು ಪ್ರೌಢಶಾಲೆ ಮುಖ್ಯಾಧ್ಯಾಪಕ, ಸಾಹಿತಿ ಸುರೇಶ ನಾಯ್ಕ ಹೇಳಿದರು.

ತಾಲೂಕಿನ ಮಂಕಿಮಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ‘ಕಡಲ ಮಡಿಲು’ ಮಕ್ಕಳ ಹಸ್ತಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದೀಪಕ ನಾಯ್ಕ ಮಾತನಾಡಿ, ಒಂದು ಸರ್ಕಾರಿ ಶಾಲೆ ಬೆಳವಣಿಗೆ ಹೊಂದಬೇಕೆಂದರೆ ಎಸ್ಡಿಎಂಸಿ ಹಾಗೂ ಪಾಲಕರ ಸಹಕಾರ ಅಗತ್ಯ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣ ಪ್ರಭಾವದಿಂದ ಎಲ್ಲ ರಂಗಗಳಲ್ಲಿ ಖಾಸಗಿಕರಣವಾಗುತ್ತಿದೆ. ಇದರ ನಡುವೆ ಸರ್ಕಾರಿ ಶಾಲೆ ಉಳಿಸಿ ಬೆಳೆಸಲು ಸಹಕಾರ ನೀಡಬೇಕು ಎಂದರು.

ಶಿಕ್ಷಣ ಸಂಯೋಜಕ ಪ್ರಮೋದ ನಾಯ್ಕ ಮಾತನಾಡಿ, ಹೊನ್ನಾವರವು ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿರುವ ತಾಲೂಕು. ತಾಲೂಕಿನ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಮಂಕಿಮಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಖುಷಿಯ ವಿಚಾರ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ, ಸಿಆರ್​ಪಿ ಮಂಜುನಾಥ ನಾಯ್ಕ, ಉಮೇಶ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಖಾರ್ವಿ, ಉಪಾಧ್ಯಕ್ಷೆ ಮಾಲಿನಿ ನಾಯ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯಾಧ್ಯಾಪಕ ಉದಯ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಸುಮಿತ್ರಾ ನಾಯ್ಕ ವರದಿ ವಾಚಿಸಿದರು. ಸುಜಾತಾ ಟಿ.ಜಿ. ವಂದಿಸಿದರು. ಅನ್ನಪೂರ್ಣ ನಾಯ್ಕ, ಜ್ಯೋತಿ ನಾಯ್ಕ, ಸಂಗೀತಾ ಗೌಡ, ಭಾರತಿ ಮೊಗೇರ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net