

ಬೇಲೂರು: ಮಕ್ಕಳಿಗೆ ವಿದ್ಯೆಯೊಂದಿಗೆ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಪಾಲಕರು ಹಾಗೂ ಶಿಕ್ಷಕರು ಮುಂದಾಗಬೇಕು ಎಂದು ಚಿಕ್ಕಮಗಳೂರು ಜಿಪಂ ಸಿಇಒ ಡಾ.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ವಿದ್ಯಾವಿಕಾಸ ಪಬ್ಲಿಕ್ ಶಾಲೆ ಯೂರೋ ಕಿಡ್ಸ್ ಪೂರ್ವ ಪ್ರಾಥಾಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಅವರಿಗೆ ಪಠ್ಯದೊಂದಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ಗಮನಿಸಬೇಕು. ತಾಯಂದಿರು ಮಕ್ಕಳಿಗೆ ಹೆಚ್ಚು ಪ್ರೀತಿ ತೋರಿಸಿ ಬೆಳೆಸುತ್ತಾರೆ. ನಾನು ಸಹ ತಾಯಿ ಪ್ರೋತ್ಸಾಹದಿಂದಲೇ ಈ ಹುದ್ದೆಗೆ ಬರಲು ಸಾಧ್ಯವಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ದೇಶದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಯಾದರೆ ಬಡವ, ಶ್ರೀಮಂತ ಎನ್ನದೆ ಎಲ್ಲರೂ ಒಂದೇ ರೀತಿಯ ಪಠ್ಯವನ್ನು ಕಲಿಯಲು ಸಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಗಮನಹರಿಸಬೇಕಿದೆ. ಜತೆಗೆ, ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರೆ ದೇಶಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ. ಪಾಲಕರು ಮಕ್ಕಳಿಗೆ ಮೊಬೈಲ್ ಬದಲು ಆಟಿಕೆಗಳನ್ನು ನೀಡಿದರೆ ನಮ್ಮ ಹಿಂದಿನ ಆಟಗಳನ್ನು ಮತ್ತೆ ಬೆಳೆಸಿದಂತಾಗುತ್ತದೆ ಎಂದರು.
ಪುರಸಭೆ ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ಮಕ್ಕಳು ಸಾಧನೆ ಮಾಡಬೇಕೆಂದು ಅವರ ಮೇಲೆ ಹೆಚ್ಚಿನ ಒತ್ತಡ ಹಾಕಬಾರದು. ಪ್ರಪಂಚದಲ್ಲಿ ಸಾಧನೆ ಮಾಡಿರುವವರು ಹೆಚ್ಚು ಅಂಕ ಪಡೆದವರಲ್ಲ. ಅವರು ತಮ್ಮ ಸ್ವಂತ ಜ್ಞಾನದಿಂದ ಮುಂದೆ ಬಂದವರು. ಈ ನಿಟ್ಟಿನಲ್ಲಿ ಪಾಲಕರು ಗಮನಹರಿಸಬೇಕು. ಹೆಚ್ಚು ಅಂಕ ಪಡೆದ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಕೆ ಮಾಡದೆ, ಅವರಲ್ಲಿ ಮಾನವೀಯ ಮೌಲ್ಯ ಹಾಗೂ ದೇಶಭಕ್ತಿ ಬೆಳೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ವಿದ್ಯಾವಿಕಾಸ ಪಬ್ಲಿಕ್ ಶಾಲೆ ಯೂರೋ ಕಿಡ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಂ.ರಂಗನಾಥ್, ಶಾಂತಲಾ ಎಜುಕೇಷನ್ ಸೊಸೈಟಿ ಅಧ್ಯಕ್ಷ ಬಿ.ಕೆ.ಭಗವಾನ್, ಟ್ರಸ್ಟಿ ಆಶಾ ರಂಗನಾಥ್, ಆಡಳಿತಾಧಿಕಾರಿ ಪದ್ಮಜಯಕುಮಾರ್, ಪ್ರಾಂಶುಪಾಲ ಬಾಲಾಜಿ ಇದ್ದರು.