ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿ

Encourage children's talent
ಲೋಕಾಪುರ ಲೋಕೇಶ್ವರ ದೇವಸ್ಥಾನ ಆವರಣದಲ್ಲಿ ಲೋಕೇಶ್ವರ ಶಿಕ್ಷಣ ಸಮಿತಿಯ ಆರ್‌ಬಿಜಿ ಶಾಲೆ ವತಿಯಿಂದ ಆಯೋಜಿಸಿದ್ದ ಸರಸ್ವತಿ ಪೂಜಾ ಸಮಾರಂಭದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
Published on

ಲೋಕಾಪುರ: ವಿದ್ಯೆ, ಜ್ಞಾನ, ಉತ್ತಮ ಸಂಸ್ಕಾರ ಅತ್ಯಂತ ಶ್ರೇಷ್ಠವಾದದ್ದು, ಅದು ಭವಿಷತ್ತಿನ ವ್ಯಕ್ತಿತ್ವಕ್ಕೆ ನೆರವಾಗುತ್ತದೆ ಎಂದು ಲೋಕೇಶ್ವರ ಶಿಕ್ಷಣ ಸಮಿತಿ ಖಜಾಂಚಿ ಡಿ.ಎಂ. ತುಬಾಕಿ ಹೇಳಿದರು.

ಪಟ್ಟಣದ ಲೋಕೇಶ್ವರ ದೇವಸ್ಥಾನ ಆವರಣದಲ್ಲಿ ಲೋಕೇಶ್ವರ ಶಿಕ್ಷಣ ಸಮಿತಿಯ ಆರ್.ಬಿ.ಜಿ ಶಾಲೆ ವತಿಯಿಂದ ಆಯೋಜಿಸಿದ್ದ ಸರಸ್ವತಿ ಪೂಜಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭೆಯನ್ನು ಗುರುತಿಸಿ ಗೌರವಿಸಿದರೆ ಹೊಸ ಸಾಧನೆ ಮಾಡಲು ಪ್ರತಿಭೆಗೆ ಪ್ರೇರಣೆಯಾಗುತ್ತದೆ.

ಸಾಧನೆಗೈದ ಮಕ್ಕಳು ಸಮಾಜದ ಋಣ ತೀರಿಸಬೇಕು. ಇಂತಹ ಪ್ರತಿಭಾ ಪುರಸ್ಕಾರಗಳು ನಿರಂತರವಾಗಿ ನಡೆಯಬೇಕು. ಇದರಿಂದ ಶೈಕ್ಷಣಿಕ ಚಟುವಟಿಕೆಯಾಧಾರಿತ ವಿಭಿನ್ನ ಕೌಶಲಗಳಿಂದ ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ಮಕ್ಕಳ ಪ್ರತಿಭೆ ಹೊರಹೊಮ್ಮಲು ಸೂಕ್ತ ವೇದಿಕೆಯನ್ನು ಒದಗಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.

ನಿವೃತ್ತ ಶಿಕ್ಷಕ ಎಸ್.ಬಿ.ಕೃಷ್ಣಗೌಡರ ಮಾತನಾಡಿ, ಸ್ಪರ್ಧಾತ್ಮಕ ಪೈಪೋಟಿ ಯುಗದಲ್ಲಿ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಕಲಿಕೆಯ ಜತೆ ಮಕ್ಕಳು ಸಹ ಪಠ್ಯ ಚಟುವಟಿಕೆ ಕಡೆಗೆ ಗಮನ ಹರಿಸಿದಾಗ ಸದೃಢ ಸಮಾಜ ನಿರ್ಮಿಸಬಹುದು ಎಂದರು.

ಕಳೆದ ವರ್ಷ ಪ್ರಾಥಮಿಕ, ಎಸ್‌ಎಸ್‌ಎಲ್‌ಸಿ ಹಾಗೂ ಕಾಲೇಜು ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಶೈಕ್ಷಣಿಕವಾಗಿ ವಿವಿಧ ವಿಭಾಗದಲ್ಲಿ ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ದಾದನಟ್ಟಿ ಶಿವಾನಂದ ಮಠದ ನಿಜಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜೆ.ಟಿ ಬುದ್ನಿ, ವಿ.ಬಿ.ಸಿಂಗರಡ್ಡಿ, ರವೀಂದ್ರ ಕಂಬಾರ, ಕಾಲೇಜು ವಿಭಾಗದ ಪ್ರಾಚಾರ್ಯ ಎಸ್.ಎಸ್. ಜೈನಾಪೂರ, ಪ್ರೌಢ ವಿಭಾಗದ ಮುಖ್ಯಶಿಕ್ಷಕ ಸಿ.ವಿ. ಬನ್ನಿ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಎಸ್.ಎಂ. ಹಡಪದ ಮತ್ತು ಎಲ್ಲ ವಿಭಾಗದ ಶಿಕ್ಷಕ ವೃಂದ, ಮಕ್ಕಳು ಇದ್ದರು. ಅಶೋಕ ಚನ್ನಪ್ಪಗೌಡರ ಸ್ವಾಗತಿಸಿದರು. ಜೆ.ಜಿ. ತೆಗ್ಗಿ ನಿರೂಪಿಸಿದರು. ಎ.ಬಿ. ಕಳ್ಳೆನ್ನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net