ಮಕ್ಕಳನ್ನು ಕನ್ನಡದಲ್ಲೇ ಮಾತನಾಡಲು ಪ್ರೇರೇಪಿಸಿ: ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಸುರೇಶ್ ಮನವಿ

gkvk rajyotsava
Published on

ಬೆಂಗಳೂರು: ಕನ್ನಡ ಮಾತೃಭಾಷೆ ಆಗಿರುವವರ ಮನೆಗಳಲ್ಲಿ ಪಾಲಕರು ಕೀಳರಿಮೆ ಬಿಟ್ಟು ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಮಾತನಾಡುವಂತೆ ಪ್ರೇರೇಪಿಸಬೇಕಿದೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಸಲಹೆ ನೀಡಿದ್ದಾರೆ.

ಬೆಂಗಳೂರು ಕೃಷಿ ವಿವಿಯ ಕನ್ನಡ ಸಂಘ ಜಿಕೆವಿಕೆಯ ಕುವೆಂಪು ಸಭಾಂಗಣದಲ್ಲಿ ಆಯೋಜಿಸಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-59 ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಆಂಗ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವ ಪದ್ಧತಿ ಬಂದಿದೆ. ಯಾವುದೇ ಭಾಷೆ ಮೇಲೆ ತಿರಸ್ಕಾರ ಇಲ್ಲ, ದ್ವೇಷದ ಮನೋಭಾವವೂ ಇಲ್ಲ. ಆದರೆ, ನಮ್ಮ ಮಾತೃಭಾಷೆಯನ್ನು ಪ್ರೀತಿ ಮಾಡಬಾರದು ಎಂದು ಹೇಳುವಂತಿಲ್ಲ. ಇಂತಹ ಸನ್ನಿವೇಶನದಲ್ಲಿ ನಾವು ಕನ್ನಡಕ್ಕೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೂ ಕನ್ನಡ ದಾಟಿಸಬೇಕಿರುವ ಕಾರಣ ಮಾತೃಭಾಷೆಯಲ್ಲೇ ಮಾತನಾಡಲು ವೇದಿಕೆ ಸೃಷ್ಟಿಸಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ಹಿರಿಯ ಸಾಹಿತಿ ಡಾ. ಹಂ.ಪ.ನಾಗರಾಜಯ್ಯ ಮಾತನಾಡಿ, ರಾಷ್ಟ್ರಕೂಟ ದೊರೆಗಳ ಆಳ್ವಿಕೆಯಲ್ಲೇ ಕನ್ನಡವು ವಿಕಸಿತ ಭಾಷೆಯಾಗಿ ಗುರುತಿಸಿಕೊಂಡಿತ್ತು. ಅಂದಿನ ಸಾಹಿತ್ಯದಲ್ಲಿ ಕವಿಗಳ ತಮ್ಮ ಬರಹಗಳಲ್ಲಿ ಪರಧರ್ಮ ಸಹಿಷ್ಣುತೆ, ಎಲ್ಲರನ್ನೂ ಸಮಾನ ದೃಷ್ಟಿಕೋನದಿಂದ ಕಾಣುವಂತಹ ವಾತಾವರಣವನ್ನು ಪ್ರತಿಪಾದಿಸಿದ್ದರು. ಈಗಲೂ ಈ ಪದ್ಧತಿ ಮುಂದುವರಿದಿರುವುದರಿಂದಲೇ ಕನ್ನಡಿಗರು ಸಹೃದಯಿಗಳು ಎಂಬ ಮನ್ನಣೆ ಪಡೆದಿದ್ದಾರೆ. ಇಂತಹ ಪರಂಪರೆಯನ್ನು ನೆನಪಿಸಿಕೊಳ್ಳುವುದು ಇತಿಹಾಸವನ್ನು ತಿರುವು ಹಾಕಿದಂತೆ ಎಂದರು.

ಬಹುಮಾನ ವಿತರಣೆ:

ಇದೇ ವೇಳೆ ಕನ್ನಡ ಸಂಘ ಆಯೋಜಿಸಿದ್ದ ಕನ್ನಡದ ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಡಾ. ಹಂಪನಾ ಬಹುಮಾನ ವಿತರಿಸಿದರು. ಗಾಯಕಿ ಸಾದ್ವಿನಿ ಕೊಪ್ಪ ಅವರು ಕನ್ನಡದ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ. ವೈ.ಎನ್.ಶಿವಲಿಂಗಯ್ಯ, ಕನ್ನಡ ಸಂಘದ ಅಧ್ಯಕ್ಷ ಡಾ. ಕೆ.ಪಿ.ರಘುಪ್ರಸಾದ್, ಡಾ. ಎಚ್.ಎಸ್.ಶಿವರಾಮು, ಡಾ. ಎನ್.ಬಿ.ಪ್ರಕಾಶ್, ಎಂ.ಎಸ್.ಪ್ರತಿಭಾ ಹಾಗೂ ಇತರರಿದ್ದರು.

ಕನ್ನಡ ಸಮೃದ್ಧವಾದ ಭಾಷೆ. ಇದಕ್ಕೆ ಸಾಕ್ಷಿಯಾಗುವಂತೆ ಎಂಟು ಜ್ಞಾನಪೀಠ ಪ್ರಶಸ್ತಿ ಸಂದಿವೆ. ಇಂತಹ ಹಿನ್ನೆಲೆಯುಳ್ಳ ಭಾಷೆಯನ್ನು ಕನ್ನಡಿಗರು ಹೃದಯವನ್ನು ಜೋಪಾನ ಮಾಡುವಂತೆ ಭಾಷಾ ಕಾಳಜಿ ವಹಿಸಬೇಕು. ಕನ್ನಡ ರಾಜ್ಯೋತ್ಸವದ ಮುಖ್ಯ ಉದ್ದೇಶವೇ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಪಸರಿಸುವುದೇ ಆಗಿದೆ.

- ಡಾ. ಹಂಪನಾ, ಹಿರಿಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net