

ಮಡಿಕೇರಿ: ಕಲೆ ಮತ್ತು ಸಂಸ್ಕೃತಿ ಪ್ರತಿಯೊಬ್ಬರಿಗೂ ಅರ್ಥವಾಗುವ ಮಾಧ್ಯಮವಾಗಿದ್ದು, ಆ ನಿಟ್ಟಿನಲ್ಲಿ ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ಕಲಾಪ್ರಕಾರಗಳಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯುವಂತಾಗಬೇಕು ಎಂದು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾ.ಪಂ.ಅಧ್ಯಕ್ಷೆ ಎಸ್.ಎಸ್.ನಂದಿನಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಹಕಾರದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕುಶಾಲನಗರ ಬಳಿಯ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ’ಜನಪರ ಉತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಡವ ವಾದ್ಯ, ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ, ನಂದಿಧ್ವಜ, ಹುಲಿವೇಷ, ಗಾರುಡಿಗೊಂಬೆ, ಭರತನಾಟ್ಯ, ಸುಗಮ ಸಂಗೀತ ಹೀಗೆ ಹಲವು ಜಾನಪದ ಕಲಾಪ್ರಕಾರಗಳು ಇಂದಿಗೂ ಸಹ ಜನಮನ ಸೆಳೆಯುತ್ತವೆ. ಆದ್ದರಿಂದ ಇಂತಹ ಕಲೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾಗಮಂಡಲ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ್ ಮಾತನಾಡಿ, ನಾಡಿನಲ್ಲಿ ಹಾಗೂ ಜಿಲ್ಲೆಯಲ್ಲಿ ವಿವಿಧ ಕಲಾಪ್ರಕಾರಗಳು ಇದ್ದು, ಅವುಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಕಲೆ ಮತ್ತು ಸಂಸ್ಕೃತಿ ಬದುಕಿನ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ, ಸಾಹಿತ್ಯ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಕಲಾ ಪ್ರಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತೆ ಮಾಡಲು ಸರ್ಕಾರ ಮುಂದಾಗಿದೆ ಎಂದರು.
ಕಲಾವಿದ ರವಿಶಂಕರ್ ಮಾತನಾಡಿ, ಪ್ರತಿಯೊಬ್ಬರ ಮನಸ್ಸನ್ನು ಬೆಸೆಯುವುದೇ ಜನಪರ ಉತ್ಸವವಾಗಿದ್ದು, ಎಲ್ಲರನ್ನು ಸೆಳೆಯುವ ಶಕ್ತಿ ಕಲಾಪ್ರಕಾರಗಳಿಗೆ ಇದೆ. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಸೋಮವಾರಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಈ.ರಾಜು, ವೆಂಕಟೇಶ್, ಉಪನ್ಯಾಸಕರು, ಶಿಕ್ಷಕರು, ಕಲಾವಿದರು ಇತರರು ಇದ್ದರು.
ಜನಮನ ಸೆಳೆದ ಮೆರವಣಿಗೆ: ಕುಶಾಲನಗರದ ಬಸವನಹಳ್ಳಿ ಮುಖ್ಯ ರಸ್ತೆಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದವರೆಗೆ ಜನಪರ ಉತ್ಸವದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಮ್ಮತ್ತಿಯ ಶ್ರೀನಿವಾಸ್‌ರವರ ಕೊಡವ ವಾದ್ಯ ತಂಡ, ಮೊಣ್ಣಂಗೇರಿಯ ಮಾಧವರವರ ತಾಳಮದ್ದಳೆ ತಂಡ, ಅಭಿಷೇಕ್ ತಂಡದಿಂದ ಡೊಳ್ಳು ಕುಣಿತ, ಹರಿಪ್ರಸಾದ್ ತಂಡದವರಿಂದ ಪೂಜಾಕುಣಿತ, ಮಧು ತಂಡದಿಂದ ನಂದಿ ಧ್ವಜ, ಕೆಂಪರಾಜು ತಂಡದವರಿಂದ ಹುಲಿವೇಷ, ದೊಡ್ಡಕರಿಯಯ್ಯ ತಂಡದವರಿಂದ ಗಾರುಡಿಗೊಂಬೆ ನಡೆಯಿತು. ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಈ.ರಾಜು ತಂಡದವರಿಂದ ಗೀತಗಾಯನ ಸೇರಿದಂತೆ ಇತರೆ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸಭಾ ಕಾರ್ಯಕ್ರಮದಲ್ಲಿ ಕಂಸಾಳೆ, ಡೊಳ್ಳು ಕುಣಿತ, ಭರತನಾಟ್ಯ, ಸುಗಮಸಂಗೀತ, ಕೊಡವ ವಾದ್ಯ, ನಗಾರಿ ಕುಣಿತ, ಹುಲಿವೇಷ, ಪೂಜಾಕುಣಿತ, ಗಾರುಡಿಗೊಂಬೆ, ಭರತನಾಟ್ಯ ಹೀಗೆ ಹಲವು ತಂಡಗಳು ನೃತ್ಯ ಪ್ರದರ್ಶನ ಮಾಡಿ ರಂಜಿಸಿದರು.
ಕಲೆಗಳನ್ನು ಗೌರವಿಸಬೇಕು. ನಾಡಿನ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿ ಪ್ರೋತ್ಸಾಹಿಸುವಲ್ಲಿ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕಲಾವಿದರನ್ನು ಪ್ರೋತ್ಸಾಹಿಸುವಲ್ಲಿ ಹಲವು ಕಾಯಕ್ರಮ ಹಮ್ಮಿಕೊಂಡಿದೆ. ಆ ಹಿನ್ನೆಲೆಯಲ್ಲಿ ’ಜನಪರ ಉತ್ಸವ’ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ.ಶೇಖರ್, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ