ಸೇವಾ ಮನೋಭಾವಕ್ಕೆ ಪ್ರೋತ್ಸಾಹ ನೀಡಿ

ಸೇವಾ ಮನೋಭಾವಕ್ಕೆ ಪ್ರೋತ್ಸಾಹ ನೀಡಿ
Published on

ಸಿದ್ದಾಪುರ: ಪಾಲಿಬೆಟ್ಟ ಚೆಶೈರ್ ಹೋಮ್ಸ್ ವಿಶೇಷ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಶಾಲೆ ಆವರಣದಲ್ಲಿ ಮಂಗಳವಾರ ಅದ್ದೂರಿಯಾಗಿ ಜರುಗಿತು.

ಭಾರತೀಯ ಕ್ರೀಡಾ ವಿವರಣೆಗಾರ ಹಾಗೂ ಪ್ರೊ ಕಬಡ್ಡಿ ಲೀಗ್ ನಿರ್ದೇಶಕ ಚಾರು ಶರ್ಮಾ ಮಾತನಾಡಿ, ಅಂಗಿವಿಕಲ ವಿದ್ಯಾರ್ಥಿಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವ ಮೂಲಕ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯ ರೂಪಿಸಲು ಸೇವಾ ಮನೋಭಾವದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಬೆಳ್ಳಿ ಹಬ್ಬ ಸಂಭ್ರಮದಲ್ಲಿರುವುದು ಸಂತಸ ತಂದಿದೆ ಎಂದರು.

ಸಂಕಷ್ಟದಲ್ಲಿರುವವರಿಗೆ ನೆರವಾಗುವುದರ ಜತೆಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಸ್ವಉದ್ಯೋಗದ ಮೂಲಕ ಸಾವಲಂಬಿ ಜೀವನ ನಡೆಸಲು ಅಗತ್ಯ ಮಾರ್ಗದರ್ಶ ನೀಡುವುದರೊಂದಿಗೆ ಜತೆಗೆ ಮಾದರಿ ವಿಶೇಷ ಚೇತನರ ಶಾಲೆಯಾಗಿ ಚೆಶೈರ್ ಹೋಮ್ಸ್ ರೂಪುಗೊಮಡಿದೆ. ಇಲ್ಲಿನ ಮಕ್ಕಳನ್ನು ಮನೆಯ ಮಕ್ಕಳಂತೆ ಪಾಲನೆ ಮಾಡುತ್ತಿರುವುದು ಶ್ಲಾಘನೀಯ. ಈ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯ ರೂಪಿಸುವ ಇಂತಹ ಕೆಲಸಕ್ಕೆ ಎಲ್ಲರು ಪ್ರೋತ್ಸಾಹ ನೀಡಬೇಕಿದೆ ಎಂದರು.

ಚೆಶೈರ್ ಹೋಮ್ಸ್ ಶಾಲೆ ಮುಖ್ಯಸ್ಥೆ ಗೀತಾ ಚಂಗಪ್ಪ ಮಾತನಾಡಿ, 6 ಮಕ್ಕಳಿಂದ ಪ್ರಾರಂಭವಾದ ಶಾಲೆ ಈಗ 25 ವರ್ಷ ಪೂರೈಸಿ ಬೆಳ್ಳಿ ಹಬ್ಬಕ್ಕೆ ಕಾಲಿಟ್ಟಿದೆ. ಪ್ರಸ್ತುತ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಹಾಗೂ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉತಮ ಭವಿಷ್ಯ ರೂಪಿಸಲು ಶಿಕ್ಷಣದೊಂದಿಗೆ ಕೌಶಲ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದ್ದು, ಕರಕುಶಲ, ಪರಿಸರ, ಆರೋಗ್ಯ, ಯೋಗ, ಗಾಯನ, ನೃತ್ಯ, ಕ್ರೀಡೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಲ್ಲರ ಸಹಕಾರದಿಂದ ಶಾಲೆ ಮುನ್ನಡೆಯುತ್ತಿದೆ. ಜತೆಗೆ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದ್ದು ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲೆಯ ಸಂಸ್ಥಾಪಕರಾದ ಸಿ.ಎ.ಮುತ್ತಣ್ಣ, ಶಾಲಾ ಮುಖ್ಯ ಶಿಕ್ಷಕ ಶಿವರಾಜ್, ಹಳೆಯ ವಿದ್ಯಾರ್ಥಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ರಂಶಾದ್, ವಿದ್ಯಾರ್ಥಿ ಸುಮೇಶ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಅನುಜಾ ಶರ್ಮಾ, ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷೆ ಪುನೀತಾ ರಾಮಸ್ವಾಮಿ, ಕಾರ್ಯದರ್ಶಿ ಆಶಾ ಸುಬ್ಬಯ್ಯ, ಖಜಾಂಚಿ ಡಾ.ಎ.ಸಿ.ಗಣಪತಿ, ಸಂಸ್ಥಾಪಕ ಸಿ.ಎ.ಮುತ್ತಣ್ಣ, ಮುಖ್ಯಶಿಕ್ಷಕ ಶಿವರಾಜ್ ಇತರರು ಇದ್ದರು. ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ, ನಾಟಕ, ಯೋಗ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net