

ಮಲ್ಲು ಬೋಳನವರ ಮೂಡಲಗಿ
ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಐದು ವರ್ಷದ ಬಾಲಕಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿನ್ನು ಎನ್‌ಕೌಂಟರ್ ಮೂಲಕ ನರಕಕ್ಕೆ ಕಳುಹಿಸಿ ಇದೀಗ ರಾಜ್ಯಾದ್ಯಂತ ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಅನ್ನಪೂರ್ಣ ಮುಕ್ಕಣ್ಣವರ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದವಳು ಎನ್ನುವುದು ಅಭಿಮಾನ ಸಂಗತಿಯಾಗಿದೆ.
ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಮಗುವನ್ನು ನೀಚ ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಾದ್ಯಂತ ಪಸರಿಸಿ ಹಂತಕನಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಎಲ್ಲೆಡೆ ಪ್ರತಿಭಟನೆ ಕಾವು ಏರ ತೋಡಗಿತ್ತು. ಹುಬ್ಬಳ್ಳಿ-ಧಾರವಾಡ ಕಮಿಷನರ್ ಶಶಿಕುಮಾರ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಪ್ರತಿಭಟನೆಗಳು ತಣ್ಣಗಾಗಲಿಲ್ಲ. ಇದರ ಮಧ್ಯೆ ಅಶೋಕನಗರದ ಪೊಲೀಸರು ತನಿಖೆ ತೀವ್ರಗೊಳಿಸಿ ಆರೋಪಿಯನ್ನು ಬಂಧಿಸಿ ಸ್ಥಳ ಮಹಜರಿಗೆ ಕರೆದುಕೊಂಡು ಹೋದರು. ಈ ವೇಳೆ ಪೊಲೀಸರ ಮೇಲೆಯೇ ದಾಳಿ ಮಾಡಲು ಯತ್ನಿಸಿದಾಗ ಅಶೋಕ ನಗರ ಪಿಎಸ್‌ಐ ಅನ್ನಪೂರ್ಣ ಅವರು ರಿವಾಲ್ವಾರ್ ತೆಗೆದು ಗುಂಡು ಹಾರಿಸಿದರು. ಆ ಗುಂಡು ಪಾಪಿಯ ಎದೆಗೆ ಹೊಕ್ಕು ನರಳುವಂತೆ ಮಾಡಿತು. ಈ ವೇಳೆ ಹಂತಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆತ ನರಕ ಸೇರಿಕೊಂಡ. ಈ ಸುದ್ದಿ ರಾಜ್ಯ ವ್ಯಾಪ್ತಿ ಹರಡುತ್ತಿದ್ದಂತೆ ಎನ್‌ಕೌಂಟರ್ ಮಾಡಿದ್ದ ಅನ್ನಪೂರ್ಣ ಧೈರ್ಯ, ಸಾಹಸ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
ಮೊದಲ ಯತ್ನದಲ್ಲೇ ಪಿಎಸ್‌ಐ ಆಗಿ ಆಯ್ಕೆ: ಗುಜನಟ್ಟಿ ಗ್ರಾಮದ ರಂಗಪ್ಪ ಹಾಗೂ ಕೆಂಚವ್ವ ಮುಕ್ಕಣ್ಣವರ ದಂಪತಿಯ 9ನೇ ಮಗಳಾಗಿ ಜನಿಸಿದ ಅನ್ನಪೂರ್ಣ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗುಜನಟ್ಟಿ ಗ್ರಾಮದಲ್ಲಿಯೇ ಮುಗಿಸಿದ್ದಾರೆ. ನಂತರ ಧರ್ಮಟ್ಟಿ ಗ್ರಾಮದಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಪಿಯು ಶಿಕ್ಷಣವನ್ನು ಗೋಕಾಕದಲ್ಲಿ ಪೂರೈಸಿ ನಂತರ ಧಾರವಾಡದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಮಾಡಿ, ಬೆಂಗಳೂರಿನಲ್ಲಿ ಎಂಎಸ್ಸಿ ಅಗ್ರಿಕಲ್ಚರಲ್ ಪೂರ್ಣಗೊಳಿಸಿದ್ದಾರೆ.
ಐಎಎಸ್ ಆಗುವ ಕನಸು: ಅನ್ನಪೂರ್ಣ ಅವರು ಐಎಎಸ್ ಆಫೀಸರ್ ಆಗುವ ಕನಸು ಕಂಡಿದ್ದರು. ಇಲ್ಲವೇ ಎಂಎಸ್ಸಿ ಅಗ್ರಿಕಲ್ಚರಲ್ ಮುಗಿಸಿದ್ದರಿಂದ ಕೃಷಿ ಇಲಾಖೆಯಲ್ಲಿ ಅಧಿಕಾರಿ ಆಗಿ ಕಾರ್ಯ ಮಾಡಬೇಕಿತ್ತು. ಆದರೆ, ಮೊದಲ ಪ್ರಯತ್ನದಲ್ಲಿಯೇ ಅವರು 2019ರಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು. ಅನ್ನಪೂರ್ಣ ಮೊದಲು ಹುಬ್ಬಳ್ಳಿಯ ಶಹರ ಠಾಣೆಗೆ ಪೋಸ್ಟಿಂಗ್ ನೀಡಲಾಯಿತು. ನಂತರ ಸಿಇಎನ್ ಠಾಣೆಯಲ್ಲಿ ಕ್ರೈಂ ಪಿಎಎಸ್ ಆಗಿಯೂ ಕೆಲಸ ನಿರ್ವಹಿಸಿರುವ ಅವರು ಸದ್ಯ ಅಶೋಕ್ ನಗರ ಪೊಲೀಸ್ ಠಾಣೆಯ ಪಿಎಎಸ್ ಆಗಿ ಕಾರ್ಯ ಮಾಡುತ್ತಿದ್ದಾರೆ.
ಸಚಿವ ಲಾಡ್ ಸೆಲ್ಯೂಟ್: ಹಂತಕನನ್ನು ಎನ್‌ಕೌಂಟರ್ ಮಾಡಿದ ಅನ್ನಪೂರ್ಣ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ವಿಚಾರಣೆಗೆ ಬಂದ ಸಚಿವ ಸಂತೋಷ ಲಾಡ್ ಅನ್ನಪೂರ್ಣ ಕಾರ್ಯಕ್ಕೆ ಮೆಚ್ಚಿ ಸೆಲ್ಯೂಟ್ ಕೂಡ ಮಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಇನ್ನೂ ಸಾಮಾಜಿಕ ಜಾಲತಾಣದಲ್ಲೂ ಅನ್ನಪೂರ್ಣ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿ ಪೋಸ್ಟ್‌ಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ ಇಡೀ ರಾಜ್ಯವೇ ಮೆಚ್ಚುವಂತಹ ಕಾರ್ಯ ಮಾಡಿರುವ ಅನ್ನಪೂರ್ಣ ಕುಂದಾನಗರಿಯ ಅಧಿಕಾರಿ ಎಂಬುವುದು ಮಾತ್ರ ನಮ್ಮೆಲ್ಲರ ಗರ್ವ ಕೂಡ ಹೌದು.
ಹುಬ್ಬಳ್ಳಿಯಲ್ಲಿ ಭಾನುವಾರ ಅತ್ಯಾಚಾರ ಯತ್ನ, ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದ ಪಿಎಸ್‌ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಶಿಫಾರಸು ಮಾಡುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ ಹಂತಕನನ್ನು ಎನ್‌ಕೌಂಟರ್ ಮಾಡಿದ ನಮ್ಮ ತಂಗಿ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮ ತಂಗಿ ಹೇಳಿಕೊಳ್ಳುವುದಕ್ಕೆ ಅಭಿಮಾನ ಅನಿಸುತ್ತಿದೆ. ಇಡೀ ರಾಜ್ಯದ ಜನತೆ ಅವಳನ್ನು ಅಭಿನಂದಿಸುತ್ತಿರುವುದು ನಮ್ಮ ಕುಟುಂಬಕ್ಕೆ ಹಾಗೂ ನಮ್ಮ ಗ್ರಾಮದ ಜನರಿಗೆ ಸಂತಸ ತಂದಿದೆ. ಭೀಮವ್ವ ಬುರ್ಜಿ ಅನ್ನಪೂರ್ಣ ಅಕ್ಕ