

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕೊಣಾಜೆ ಗ್ರಾಮದ ಪಟ್ಟೋರಿ ಅರಸರಮೂಲೆ ಎಂಬಲ್ಲಿ ಕಳೆದೆರಡು ವಾರಗಳಿಂದ ಖಾಸಗಿಯವರಿಗೆ ಸಂಬಂಧಪಟ್ಟ ಗುಡ್ಡ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದ್ದು, ಕೆಳಭಾಗದಲ್ಲಿರುವ ಮನೆಗಳಿಗೆ ಅಪಾಯ ಎದುರಾಗಿದೆ.
ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11ನೇ ವಾರ್ಡ್ನ ಪಟ್ಟೋರಿ ಅರಸರಮೂಲೆ ಗುಡ್ಡ ಮತ್ತು ಬಯಲು ಪ್ರದೇಶ ಹೊಂದಿದೆ. ಕಳೆದ 15 ದಿನಗಳಿಂದ ಜೆಸಿಬಿಯಲ್ಲಿ ಗುಡ್ಡ ಸಮತಟ್ಟು ಮಾಡುವ ಕೆಲಸ ಭರದಿಂದ ಸಾಗಿದ್ದು, ಕಳೆದ ವಾರ ಸುರಿದ ಭಾರಿ ಮಳೆಗೆ ಮೇಲ್ಭಾಗದಿಂದ ಮಣ್ಣು ನೀರಿನೊಂದಿಗೆ ಹರಿದು ಕೆಳಭಾಗದಲ್ಲಿರುವ ಮನೆಗಳು, ಜಮೀನಿಗೆ ಬಿದ್ದಿದೆ.
ಮೇಲ್ಭಾಗದಲ್ಲಿರುವ ಕೆಎಸ್ಆರ್ಪಿ ವಸತಿಯಿಂದ ಹಿಂದಿನಿಂದಲೂ ಕಲುಷಿತ ನೀರು ಮನೆ ಅಂಗಳಕ್ಕೆ ಬರುತ್ತಿದ್ದು, ಇದೀಗ ಗುಡ್ಡ ಸಮತಟ್ಟು ಕೆಲಸ ನಡೆಯುತ್ತಿರುವುದರಿಂದ ಮಳೆಗೆ ಮಣ್ಣು ಕುಸಿದು ಅಂಗಳಕ್ಕೆ ಬಂದಿದೆ. ಸ್ಥಳೀಯ ನಿವಾಸಿಗಳು ಕೊಣಾಜೆ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತಂಕದಲ್ಲಿ ಸ್ಥಳೀಯರು
ಸುಧಾಕರ್ ಬಿ. ಎಂಬುವರ ಮನೆಯ ಹಿಂಬದಿ ಗೋಡೆ, ಅಂಗಳಕ್ಕೆ ಭಾರಿ ಪ್ರಮಾಣದ ಮಣ್ಣು ಮತ್ತು ನೀರು ಬಂದು ಆವರಣ ಗೋಡೆ ಕುಸಿದು ಬಿದ್ದಿದೆ. ಗುಡ್ಡ ಸಮತಟ್ಟು ಕೆಲಸ ಮುಂದುವರಿದಿದ್ದು, ಮತ್ತೆ ಮಳೆ ಬಂದರೆ ಕೆಳಭಾಗದಲ್ಲಿರುವ ಮನೆಗಳಿಗೆ ಭಾರಿ ಅಪಾಯ ಎದುರಾಗುವ ಆತಂಕ ಇದೆ.
ಮಳೆಗೆ ಗುಡ್ಡದ ಮಣ್ಣು ಕುಸಿದು ಭಾರಿ ಪ್ರಮಾಣದಲ್ಲಿ ಮನೆಯಂಗಳಕ್ಕೆ ಬಂದಿದೆ. ಈ ಬಗ್ಗೆ ಗ್ರಾಮ ಪಮಚಾಯಿತಿಗೆ ದೂರು ನೀಡಿದ ಬಳಿಕವೂ ಜೆಸಿಬಿ ಕೆಲಸ ಮುಂದುವರಿಸಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು. ಸುಧಾಕರ್ ಬಿ., ಸ್ಥಳೀಯ ನಿವಾಸಿ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳಲಾಗುವುದು. ಮುತ್ತಪ್ಪ ಡಿ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ https://www.vijayavani.net/alternate-road-for-vehicular-traffic https://www.vijayavani.net/thokuru-temple-pallakki-utsava