ದೇವಿ ಹೆಸರಲ್ಲಿ ವಂಚಿಸಿದ್ದ ಮಂತ್ರವಾದಿ ಗ್ಯಾಂಗ್ ಸೆರೆ: ಸಿಸಿಬಿ ಪೊಲೀಸರಿಂದ ದಾಳಿ

godf
Published on

ಬೆಂಗಳೂರು/ಬೂದಿಕೋಟೆ: ಕೌಟುಂಬಿಕ ಸಮಸ್ಯೆ ಪರಿಹರಿಸುವುದಾಗಿ ಮಹಿಳೆಯನ್ನು ನಂಬಿಸಿ, ಸೊಲ್ಲಾಪುರದ ದೇವಿ ಹೆಸರಿನಲ್ಲಿ 27 ಕೋಟಿ ರೂ. ದೋಚಿದ್ದ ಮಂತ್ರವಾದಿಯ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ.

ಮಂತ್ರವಾದಿ ನಾಗರಾಜ್​ನ ಬಾಮೈದ ಪೆರುಮಾಳ್ (40) ಮತ್ತು ಸಹಚರರಾದ ದೇವರಾಜ್ (38), ಹೊಸೂರು ಮಂಜು (36) ಹಾಗೂ ಸಾಯಿಕೃಷ್ಣ (39) ಬಂಧಿತರು. ಗುರುವಾರ (ಫೆ.27) ತಡರಾತ್ರಿ ಬಂಗಾರಪೇಟೆ ಬೆಂಗನೂರು ಗ್ರಾಮದಲ್ಲಿರುವ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ನಗದು ಹಣ ಮತ್ತು ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಗರಾಜ್ ಮತ್ತು ಆತನ ಪತ್ನಿ ಲಕ್ಷ್ಮಮ್ಮ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ನಿಂಬೆಹಣ್ಣು ಕೊಟ್ಟು ಮರುಳಾಗಿಸಿದ್ದ: ನಾಗರಾಜ್ 10 ವರ್ಷದ ಹಿಂದೆ ಬಂಗಾರಪೇಟೆಯ ಬೆಂಗನೂರಿನಲ್ಲಿ ಸೊಲ್ಲಾಪುರದಮ್ಮ ದೇವಸ್ಥಾನದಲ್ಲಿ ಅರ್ಚಕನಾಗಿದ್ದು, ಜತೆಗೆ ಮೆಕಾನಿಕ್ ಕೆಲಸ ಮಾಡುತ್ತಿದ್ದ. ದೇವಸ್ಥಾನಕ್ಕೆ ಹೋಗುತ್ತಿದ್ದ ಜನರಿಗೆ ಪೂಜೆಗೆಂದು ಇರಿಸಿದ್ದ ನಿಂಬೆಹಣ್ಣು, ಹೂ, ಬಟ್ಟೆ ಇನ್ನಿತರ ವಸ್ತುಗಳನ್ನು ಕೊಟ್ಟು ಮರುಳು ಮಾಡಿದ್ದ. ಇದರಿಂದ ಆತನ ಹೆಸರು ಸುತ್ತಮುತ್ತಲಿನ ಊರುಗಳಿಗೂ ಹಬ್ಬಿತ್ತು. ಬಳಿಕ ಫುಲ್​ಟೈಂ ಮಂತ್ರವಾದಿಯಾಗಿ ಬದಲಾಗಿದ್ದ. ಕಷ್ಟಗಳನ್ನು ಹೇಳಿಕೊಂಡು ಬರುತ್ತಿದ್ದವರಿಗೆ, ಸೊಲ್ಲಾಪುರದ ದೇವಿ ಹೆಸರಿನಲ್ಲಿ ಪರಿಹಾರ ಕಲ್ಪಿಸುವುದಾಗಿ ಹಣ ವಸೂಲಿ ಮಾಡುವ ದಂಧೆ ಶುರು ಮಾಡಿದ್ದ.

ದೌರ್ಬಲ್ಯವೇ ಬಂಡವಾಳ: 2014ರಲ್ಲಿ ರಾಮಮೂರ್ತಿನಗರದ 48 ವರ್ಷದ ಮಹಿಳೆಗೆ ಪರಿಚಯವಾಗಿದ್ದ. ಸಂತ್ರಸ್ತೆ ಆಸ್ತಿ ವಿಚಾರವಾಗಿ ಕೋರ್ಟ್​ಗೆ ಅಲೆಯುತ್ತಿದ್ದು, ಈ ವಿಚಾರವನ್ನು ನಾಗರಾಜ್ ಮುಂದೆ ಹೇಳಿಕೊಂಡಿದ್ದರು. ಪ್ರತಿ ಶುಕ್ರವಾರ ಮತ್ತು ಮಂಗಳವಾರ ಸೊಲ್ಲಾಪುರದಮ್ಮನ ಪೂಜೆ ಮಾಡುತ್ತೇನೆ. ಆಗ ತಾಯಿ ಮೈಮೇಲೆ ಬರುತ್ತಾಳೆ. ಆಕೆ ಹೇಳುವ ಮಾತನ್ನು ಚಾಚೂತಪ್ಪದೆ ಪಾಲಿಸಿದರೆ ಸಂಕಷ್ಟಗಳೆಲ್ಲ ದೂರವಾಗುತ್ತವೆ. ದೇವಿ ಮಾತನ್ನು ನಿರ್ಲಕ್ಷಿಸಿದರೆ ಮನೆ ಸ್ಮಶಾನ ಆಗುತ್ತದೆ ಎಂದು ಬೆದರಿಸಿದ್ದ. ಹೀಗೆ ಮಹಿಳೆಯ ದೌರ್ಬಲ್ಯಗಳನ್ನು ತಿಳಿದು ತಿಂಗಳಿಗೊಮ್ಮೆ ಪೂಜೆ ಮಾಡಿದ್ದ. ಪೂಜೆ ಬಳಿಕ ದೇವಿ ಹೆಸರಿನಲ್ಲಿ 3 ಚಿನ್ನದ ಗಟ್ಟಿ, 5 ಕೋಟಿ ರೂ. ನಗದು ಹಾಗೂ ತನ್ನ ಸಹಚರರಿಗೆ 22 ಕೋಟಿ ರೂ. ಮೌಲ್ಯದ 10ಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡಿಸಿ, ಆ ಹಣವನ್ನು ತಾನೇ ತೆಗೆದುಕೊಂಡಿದ್ದ. ಬಂಧಿತ ಆರೋಪಿಗಳು ನಿವೇಶನ ಮಾರಾಟದಲ್ಲಿ ಮಂತ್ರವಾದಿ ನಾಗರಾಜ್ ಜತೆ ಕೈಜೋಡಿಸಿದ್ದರು. ಆತನಿಂದ ಲಕ್ಷಾಂತರ ರೂ. ಕಮಿಷನ್ ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ದೇವ ಸ್ಥಾನಕ್ಕೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸಲಾಗಿದೆ. ಪೊಲೀಸರು ಏಕಾಏಕಿ ಮನೆಗೆ ನುಗ್ಗಿದ್ದಾರೆ. | ತಾಯಮ್ಮ ನಾಗರಾಜ್ ತಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net