ಕರ್ನಾಟಕದಲ್ಲಿ ಬೈಕ್ಸ್ ಟ್ಯಾಕ್ಸಿಗೆ ಕಾನೂನು ರೂಪಿಸಿ : ಬೈಕ್ ಟ್ಯಾಕ್ಸಿ ಸವಾರರ ಒತ್ತಾಯ

bike taxi
Published on

ಮೈಸೂರು: ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಸವಾರರ ಸಮಸ್ಯೆಗಳ ಕುರಿತು ಚರ್ಚಿಸಲು ಭಾನುವಾರ ಒಂಟಿಕೊಪ್ಪಲಿನ ಚೆಲುವಾ ಂಬ ಉದ್ಯಾನದಲ್ಲಿ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ವತಿಯಿಂದ ಸಭೆ ನಡೆಯಿತು. ಬೈಕ್ ಟ್ಯಾಕ್ಸಿ ಸೇವೆ ಸುಗಮವಾಗಿ ನಡೆಯಲು ಸರ್ಕಾರ ಸೂಕ್ತ ಕಾನೂನು, ನಿಯಮಾವಳಿಗಳನ್ನು ರೂಪಿಸಬೇಕು ಎಂದು ಸಭೆ ಒತ್ತಾಯಿಸಿದೆ.

ನಗರದಲ್ಲಿ 250ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳು ಇದ್ದು, ಈ ಬೈಕ್ ಟ್ಯಾಕ್ಸಿಗಳು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿವೆ. ಜನರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸುರಕ್ಷಿತವಾಗಿ ಕರೆದೊಯ್ಯುವಲ್ಲಿ ಬೈಕ್ ಟ್ಯಾಕ್ಸಿ ಸವಾರರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬೈಕ್ ಟ್ಯಾಕ್ಸಿಯಿಂದ ಸಾಕಷ್ಟು ಜನರ ಬದುಕು ಹಸನಾಗಿದೆ. ನಾವು ನೀಡುತ್ತಿರುವ ಸೇವೆಗೆ ಜಿಎಸ್‌ಟಿಯನ್ನು ಸಹ ಪಾವತಿ ಮಾಡುತ್ತಿದ್ದೇವೆ. ಆದರೆ, ನ್ಯಾಯಾಲಯ ಬೈಕ್ ಟ್ಯಾಕ್ಸಿ ಸೇವೆ ರದ್ದುಗೊಳಿಸಲು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಮ್ಮ ಬದುಕು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರ್ಕಾರ ತುರ್ತಾಗಿ ಈ ಬಗ್ಗೆ ಕ್ರಮ ವಹಿಸಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸುಲಲಿತವಾಗಿ ನಡೆಯಲು ಸೂಕ್ತ ಕಾನೂನು, ನಿಯಮಾವಳಿಗಳನ್ನು ರೂಪಿಸಬೇಕು ಎಂದು ಸಂಘದ ಅಧ್ಯಕ್ಷ ಮಹಾದೇವ ನಾಯಕ ಆಗ್ರಹಿಸಿದರು.

ನ್ಯಾಯಾಲಯದ ಆದೇಶದಿಂದ ಇನ್ನು ಮುಂದೆ ಬೈಕ್ ಟ್ಯಾಕ್ಸಿ ಸೇವೆ ನೀಡುವುದು ಸ್ಥಗಿತಗೊಳ್ಳಲಿದೆ. ಇದರಿಂದ ನಮ್ಮ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯ ಸರ್ಕಾರ ಸಕ್ರಮಗೊಳಿಸಬೇಕು ಅಥವಾ ನಮ್ಮ ದುಡಿಗೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು. ದೇಶದ 19 ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳು ಸೇವೆ ಒದಗಿಸುತ್ತಿವೆ. ಹಲವು ರಾಜ್ಯಗಳು ಈಗಾಗಲೇ ಸೂಕ್ತ ಸುರಕ್ಷತೆಯ ಪರೀಕ್ಷೆಗಳೊಂದಿಗೆ ಬೈಕ್ ಟ್ಯಾಕ್ಸಿ ಸೇವೆಯನ್ನು ಕಾನೂನುಬದ್ಧಗೊಳಿಸಿವೆ. ರಾಜ್ಯದಲ್ಲೂ ಬೈಕ್ ಟ್ಯಾಕ್ಸಿ ಸೇವೆ ನೀಡಲು ಕಾನೂನು ರೂಪಿಸದೆ ಇರುವ ಹಿನ್ನೆಲೆಯಲ್ಲಿ ಸಮಸ್ಯೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದು ಎಂದರು.

ಬೈಕ್ ಟ್ಯಾಕ್ಸಿಯು ಹಲವಾರು ಜನರಿಗೆ ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಉಪಯುಕ್ತವಾಗಿದೆ. ತುರ್ತಾಗಿ ಆಸ್ಪತ್ರೆಗಳಿಗೆ, ಕಚೇರಿಗಳಿಗೆ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಿಗೆ ತೆರಳುವವರಿಗೆ ಬೈಕ್ ಟ್ಯಾಕ್ಸಿ ಅನುಕೂಲಕರವಾಗಿದೆ. ಗ್ರಾಹಕರು ಹೇಳಿದ ಸ್ಥಳಗಳಿಗೆ ಕರೆದೊಯ್ದು ಸುರಕ್ಷಿತವಾಗಿ ಬಿಟ್ಟು ಬರುತ್ತೇವೆ. ನಮ್ಮಿಂದ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅವರ ಸುರಕ್ಷತೆಯೇ ನಮ್ಮ ಧ್ಯೇಯವಾಗಿರುತ್ತದೆ. ಹಾಗಾಗಿ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಂಘದ ಸದಸ್ಯ ಎಂ. ಶಂಕರ್ ಮಾತನಾಡಿ, ಬೈಕ್ ಟ್ಯಾಕ್ಸಿ ವಿಚಾರವಾಗಿ ಸರ್ಕಾರ ಯಾವುದೇ ತೀರ್ಮಾನಕ್ಕೆ ಬರೆದಿದ್ದಲ್ಲಿ, ನಾವು ಜನತಾ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಆದ್ದರಿಂದ ಸರ್ಕಾರವು ನಮ್ಮ ಬದುಕಿಗೆ ಆಶ್ರಯವಾಗಬೇಕು, ಮತ್ತೆ ಬೈಕ್ ಟ್ಯಾಕ್ಸಿ ಓಡಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಸದ್ಯದಲ್ಲಿಯೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ಬಳಿಕ ಶಾಸಕ ಕೆ. ಹರೀಶ್ ಗೌಡ ಅವರನ್ನು ಭೇಟಿಯಾದ ಬೈಕ್ ಟ್ಯಾಕ್ಸಿ ಸವಾರರು ನಮ್ಮ ಬೇಡಿಕೆ ಕುರಿತು ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು. ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹರೀಶ್ ಗೌಡ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net