

ಸಿರಗುಪ್ಪ: ಎರಡು ತಿಂಗಳಾದರೂ ತಾಲೂಕಿನಲ್ಲಿ ಉತ್ತಮ ಮಳೆಯಾಗಿಲ್ಲ. ಇದರಿಂದ ಹಗರಿ ನದಿ, ವಿವಿಧ ಹಳ್ಳಗಳು ಬತ್ತಿವೆ. ಆದರೆ ಟಿಬಿ ಡ್ಯಾಂ ಭರ್ತಿಯಾಗಿ ಒಂದು ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಹೊರಬಿಟ್ಟಿದ್ದರಿಂದ ತುಂಗಭದ್ರಾ ನದಿಗೆ ಜೀವಕಳೆ ಬಂದಿದೆ.
ನೀರಿಲ್ಲದೆ ಕಲ್ಲುಬಂಡೆಗಳು, ಪೊದೆಗಳಷ್ಟೇ ನದಿ ಪಾತ್ರದಲ್ಲಿ ಕಾಣಿಸುತ್ತಿದ್ದವು. ಜಲಚರಗಳು ನೀರಿಗಾಗಿ ಪರಿತಪಿಸುತ್ತಿದ್ದವು. ಇದೀಗ ನದಿ ಮೈದುಂಬಿಕೊಂಡು ಹರಿಯುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು, ರೈತರು ತುಂಗಭದ್ರೆಯ ನೀರಿನ ಚೆಲವು, ವೈಯ್ಯರ ನೋಡಲು ತಂಡೋಪತಂಡವಾಗಿ ನದಿ ದಂಡೆಗೆ ಬರುತ್ತಿದ್ದಾರೆ.
ನದಿಯ ಪರಿಸರದಲ್ಲಿ ಜನಜಾತ್ರೆ, ವಾಹನಗಳ ಕಾರುಬಾರು ಸಾಮಾನ್ಯವಾಗಿದೆ. ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಬಂದವರು ನದಿಯ ಪಕ್ಕದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ.
ತುಂಗಭದ್ರಾ ನದಿಪಾತ್ರದಲ್ಲಿರುವ ಜನರಿಗೆ ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ಕ್ರಮವಾಗಿತಾಲೂಕು ಆಡಳಿತ ಗ್ರಾಮಗಳಲ್ಲಿ ಡಂಗುರ ಸಾರಿ ಅರಿವು ಮೂಡಿಸುತ್ತಿದೆ. ನದಿ ದಂಡೆಯಲ್ಲಿರುವ ತಾಲೂಕಿನ ಎಂ.ಸೂಗೂರು, ಮಣ್ಣೂರು, ನಡವಿ, ರುದ್ರಪಾದ, ಕೆಂಚನಗುಡ್ಡ, ಬಾಗೇವಾಡಿ, ದೇಶನೂರು, ಹೊನ್ನಾರಹಳ್ಳಿ, ಹಚ್ಚೊಳ್ಳಿ ಸೇರಿ ವಿವಿಧ ಗ್ರಾಮಗಳಿಗೆ ತಹಸೀಲ್ದಾರ್ ಎಚ್.ವಿಶ್ವನಾಥ, ಜಿಲ್ಲಾ ನೋಡಲ್ ಅಧಿಕಾರಿ ವಿಜಯ್‌ಕುಮಾರ್ ಭೇಟಿ ನೀಡಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿ ದಂಡೆಗೆ ತೆರಳದಂತೆ ಮನವಿ ಮಾಡಿದ್ದಾರೆ.
ಡಿವೈಎಸ್ಪಿ ವೆಂಕಟೇಶ ದೇಶನೂರು ಸೇತುವೆ ಮತ್ತು ಕೆಂಚನಗುಡ್ಡದ ನದಿ ತೀರಕ್ಕೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ನದಿ ತೀರದಲ್ಲಿರುವ ಕೆಂಚನಗುಡ್ಡ ಐತಿಹಾಸಿಕ ಪ್ರವಾಸಿತಾಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ದೇಶನೂರು ಸೇತುವೆ ಹತ್ತಿರ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜನರು ನೀರಿಗಿಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.