ತಿಪ್ಪೆಗುಂಡಿಯಾದ ಖಾಲಿ ಸೈಟ್..!

empty site
Published on

ನರೇಗಲ್ಲ: ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿನ ಖಾಲಿ ನಿವೇಶನಗಳು ಕಸದ ತೊಟ್ಟಿಯಾಗಿವೆ. ಮನೆಗಳ ತ್ಯಾಜ್ಯ ಅಲ್ಲಿ ಸಂಗ್ರಹವಾಗುತ್ತಿದೆ. ಮಾಲೀಕರಿಗೆ ನಿವೇಶನ ಆಸ್ತಿಯಾದರೆ, ಪಕ್ಕದ ಮನೆಯವರಿಗೆ ಅದು ತಿಪ್ಪೆಗುಂಡಿಯಂತಾಗಿದೆ. ಪಟ್ಟಣದ ಸೌಂದರ್ಯೀಕರಣ ಕಾಪಾಡುವುದು ಪಟ್ಟಣ ಪಂಚಾಯಿತಿಯ ಜವಾಬ್ದಾರಿಯಾಗಿದೆ. ಆದರೆ ಖಾಲಿ ನಿವೇಶನಗಳಲ್ಲಿನ ತ್ಯಾಜ್ಯದ ನಿರ್ವಹಣೆಯೇ ಪ.ಪಂಗೆ ಸವಾಲಾಗಿವೆ.

ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಡಿಕೊಪ್ಪ, ಕೋಚಲಾಪುರ, ದ್ಯಾಂಪೂರ, ಮಲ್ಲಾಪುರ ಗ್ರಾಮಗಳಲ್ಲಿ ಒಟ್ಟು 1,484 ಖಾಲಿ ನಿವೇಶನಗಳಿವೆ. ಆ ನಿವೇಶನಗಳಲ್ಲಿ ಜಾಲಿ ಕಂಟಿ ಬೆಳೆದು ಹಂದಿಗಳ ಆಶ್ರಯ ತಾಣವಾಗಿದೆ. ನಿವೇಶನ ಖರೀದಿಸಿದ ನಂತರ ಮಾಲೀಕರು ತಿರುಗಿಯೂ ನೋಡುವುದಿಲ್ಲ. ಇದರಿಂದಾಗಿ ಖಾಲಿ ನಿವೇಶನಗಳು ಕಸ ಸಂಗ್ರಹದ ತಾಣವಾಗಿವೆ.

ಪಪಂ ಅಧಿಕಾರಿಗಳ ನಿರ್ಲಕ್ಷೃ: ಖಾಲಿ ನಿವೇಶನಗಳ ನಿರ್ವಹಣೆಗೆ ನಿಯಮಗಳಿವೆ. ಅವುಗಳ ಪ್ರಕಾರ ಖಾಲಿ ನಿವೇಶನದ ಮಾಲೀಕರು ನಿವೇಶನವನ್ನು ಸ್ವಚ್ಛವಾಗಿಡಬೇಕು. ಇಲ್ಲದಿದ್ದರೆ, ಸ್ಥಳೀಯ ಸಂಸ್ಥೆಯವರು ನಿವೇಶನದ ಮಾಲೀಕರಿಗೆ ನೋಟಿಸ್ ನೀಡಬೇಕು.

ಆದರೆ, ಪಟ್ಟಣ ಪಂಚಾಯಿತಿಯಿಂದ ಈವರೆಗೆ ಯಾರಿಗೂ ನೋಟಿಸ್ ನೀಡಿಲ್ಲ. ನೋಟಿಸ್‌ಗೆ ನಿವೇಶನದ ಮಾಲೀಕರು ಸ್ಪಂದಿಸದಿದ್ದರೆ ಅಂತಹ ಖಾಲಿ ನಿವೇಶನದಲ್ಲಿನ ಕಸವನ್ನು ಸ್ಥಳೀಯ ಸಂಸ್ಥೆಯವರು ಸ್ವಚ್ಛಗೊಳಿಸಿ, ಅದಕ್ಕೆ ತಗುಲುವ ವೆಚ್ಚವನ್ನು ಖಾಲಿ ನಿವೇಶನದ ಮೇಲೆ ಭೋಜಾ ಕೂಡಿಸುವ ಅಧಿಕಾರ ಸ್ಥಳೀಯ ಸಂಸ್ಥೆಗಳಿಗಿದೆ. ಆದರೆ, ಇಂತಹ ಕ್ರಮ ಜರುಗಿಸಿದ ಒಂದೂ ನಿದರ್ಶನಗಳಿಲ್ಲ.

ಬಹುತೇಕ ನಿವೇಶನಗಳ ಮಾಲೀಕರಿಗೆ ಕಟ್ಟಡ ಕಟ್ಟುವ ಉದ್ದೇಶವೂ ಇಲ್ಲ. ವಾಸಕ್ಕೆ ಮನೆ ಇದ್ದರೂ ಮತ್ತೊಂದು ಸೈಟ್ ಇರಲಿ ಎಂಬ ಕಾರಣಕ್ಕೆ ಆಸ್ತಿ ಖರೀದಿಸಿ ಬೇರೆಲ್ಲೋ ವಾಸವಾಗಿದ್ದಾರೆ. ಇತ್ತ ಮಾರಾಟವೂ ಮಾಡದೆ, ಅತ್ತ ಮನೆಯನ್ನೂ ಕಟ್ಟದೇ ಖಾಲಿ ಬಿಟ್ಟ ಸೈಟ್‌ಗಳು ಈಗ ಕಸದ ತೊಟ್ಟಿಗಳಾಗುತ್ತಿವೆ.

ಚರಂಡಿಗಳೆಲ್ಲ ತ್ಯಾಜ್ಯ

ಪಟ್ಟಣದ ಖಾಲಿ ಪ್ರದೇಶ, ರಸ್ತೆ, ಬದಿಯಲ್ಲಿ ಮಾತ್ರ ಕಸ ತುಂಬಿಲ್ಲ. ಚರಂಡಿಗಳಲ್ಲೂ ಪ್ಲಾಸ್ಟಿಕ್ ಕವರ್, ತ್ಯಾಜ್ಯ ಸುರಿಯುವುದರಿಂದ ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮ ನೀರು ಅಲ್ಲೇ ನಿಂತು ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ.

ನರೇಗಲ್ಲ ಪಟ್ಟಣದ ಸಂತೆ ಬಜಾರದ ಸಾರ್ವಜನಿಕ ಗ್ರಂಥಾಲಯದ ಪಕ್ಕದಲ್ಲಿನ ಎರಡು ಖಾಲಿ ನಿವೇಶನ ಬಯಲು ಶೌಚಗೃಹವಾಗಿವೆ. ಜನರು ಕಸವನ್ನು ಎಸೆಯುತ್ತಿದ್ದಾರೆ. ನಿವೇಶನದ ಮುಂಭಾಗದಲ್ಲಿ ಗಣೇಶ ದೇವಸ್ಥಾನವಿದ್ದು, ದೇವಸ್ಥಾನ ಹೋಗುವವರು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಪಪಂ ಅಧಿಕಾರಿಗಳ ಗಮಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.ಮಂಜು ಹಡಪದ ನರೇಗಲ್ಲ ನಿವಾಸಿ ಕೋಡಿಕೊಪ್ಪದ ಅನ್ನದಾನೇಶ್ವರ ನಗರದಲ್ಲಿ ಖಾಲಿ ನಿವೇಶನಗಳಿವೆ. ಅಲ್ಲಿ ಜಾಲಿಕಂಟಿ ಬೆಳೆದು ಹಂದಿಗಳ ಆಶ್ರಯ ತಾಣವಾಗಿವೆ. ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಖಾಲಿ ನಿವೇಶನಗಳಲ್ಲಿನ ಕಸದ ಬಗ್ಗೆ ತಿಳಿಸಿದರೂ ಕ್ರಮಕ್ಕೆ ಮುಂದಾಗಿಲ್ಲ. ನಿವೇಶನದ ಮಾಲೀಕರು ಸ್ವಚ್ಛ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದ ವಾತಾವರಣ ಕಲುಷಿತಗೊಂಡಿದೆ.ಅರುಣ ಕುಲಕರ್ಣಿ ಸ್ಥಳೀಯ ನಿವಾಸಿ ಪಟ್ಟಣ ಸೇರಿ ನಮ್ಮ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿನ ಕಸ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿತ್ಯ ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಯ ನಡೆದಿದೆ. ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು.ರಾಮಚಂದ್ರಪ್ಪ ಕಜ್ಜಿ ಆರೋಗ್ಯ ನಿರೀಕ್ಷಕ, ನರೇಗಲ್ಲ ಪಟ್ಟಣ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net