

ಅಥಣಿ: ಗೈರಾಣ ಜಾಗದಲ್ಲಿ ಖಾಲಿ ನಿವೇಶನ ನೀಡುವುದಾಗಿ ಪುರಸಭೆ ಸಿಬ್ಬಂದಿ 120 ಜನರಿಂದ ಕೋಟ್ಯಂತರ ರೂ. ವಂಚಿಸಿದ ಘಟನೆ ಅಥಣಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಹೊರವಲಯದ ಕೃಷ್ಣಾ ಬಡಾವಣೆಯಲ್ಲಿರುವ ಗೈರಾಣ ಜಾಗದಲ್ಲಿ ಅಕ್ರಮವಾಗಿ ವಾಸವಾಗಿರುವ ಜನರಿಂದ ಪುರಸಭೆಯಲ್ಲಿ ವಾಟರಮನ್ ಹಣ ಪಡೆದು ಪುರಸಭೆಯಿಂದ ನಿವೇಶನ ನೀಡುವುದಾಗಿ ನಂಬಿಸಿ ಮುಖ್ಯಾಧಿಕಾರಿ ಸಹಿ ನಕಲು ಮಾಡಿದ ಕೈಬರಹದಲ್ಲಿರುವ ಉತಾರ ಒದಗಿಸಿದ್ದಾನೆ. 50 ಸಾವಿರ ರೂ.ದಿಂದ 5 ಲಕ್ಷ ರೂ.ವರೆಗೆ ಅಂದಾಜು 4 ಕೋಟಿ ರೂ. ಪಡೆದು ವಂಚಿಸಿದ್ದಾನೆ ಎಂದು ನಿವೇಶನ ಅಪೇಕ್ಷಿತರು ಆರೋಪಿಸಿದ್ದಾರೆ.
ಹಣ ವಾಪಸ್ ಕೊಡಿಸಲು ಆಗ್ರಹ: ಪುರಸಭೆಯಿಂದ ಖಾಲಿ ನಿವೇಶನ ಕೊಡಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಒತ್ತಿ ಇಟ್ಟು ಹಣ ನೀಡಿದ್ದೇವೆ. ಹಣ ಪಡೆದು ವಂಚಿಸಿದವರ ವಿರುದ್ಧ ಕ್ರಮ ಕೈಗೊಂಡು ಹಣ ಹಿಂತಿರುಗಿಸಲು ಕ್ರಮವಹಿಸುವಂತೆ ಸಂತ್ರಸ್ತರಾದ ಜಯಶ್ರೀ ಮಾನೆ, ಮಾಯವ್ವ ಕೊಂಡಗೋಳಿ, ದಿಲಶಾದ್ ಮಕಾನದಾರ, ಚಂದ್ರಕಲಾ ಗಾಡಿವಡ್ಡರ, ವಿಮಲಾ ಗಾಡಿವಡ್ಡರ, ಮಹಾದೇವ ಶೇಲರ, ಆಯೇಶಾ ಪಕಾಲಿ, ವಿಶ್ವನಾಥ ವಾಘಮೋಡೆ, ಸಂತೋಷ ಕಲಾಲ, ಇಂದುಮತಿ ಮಾಳಿ, ಭಾರತಿ ಗಾಡಿವಡ್ಡರ, ಪ್ರಿಯಾ ಶೇಲರ, ಮಹಾದೇವಿ ಮನಿವಡ್ಡರ, ಸುನೀಲ ಗಾಡಿವಡ್ಡರ, ಶೈಲಾ ಚಿಂಚಲಿ, ಕೃಷ್ಣಾಬಾಯಿ ಮುಂಜೆ ಆಗ್ರಹಿಸಿದ್ದು, ಉಪತಹಸೀಲ್ದಾರ್ ಬಿ.ವೈ.ಹೊಸಕೇರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸರ್ಕಾರದ ಗೈರಾಣ ಜಾಗವನ್ನು ಯಾರಿಗೂ ನೀಡಲು ಬರುವುದಿಲ್ಲ. ಕೈ ಬರಹ ಉತಾರ ನೀಡಿರುವುದು ತಪ್ಪು. ಇದಕ್ಕೆ ಸಂಬಂಧಿಸಿ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ಪರಿಶೀಲಿಸಿ ವಂಚನೆ ಆಗಿರುವುದು ಕಂಡುಬಂದಲ್ಲಿ ಶಿಸ್ತುಕ್ರಮಕ್ಕಾಗಿ ಮೇಲಧಿಕಾರಿಗೆ ಮಾಹಿತಿ ನೀಡುತ್ತೇನೆ.