

ಮೂಡಿಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಗುಂಪುಗಳಿಂದಾಗಿ ಮಹಿಳೆಯರು ಆರ್ಥಿಕವಾಗಿ ಸಬಲಗೊಂಡು ಕುಟುಂಬದ ನಿರ್ವಹಣೆ ಜತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಅಭಿಪ್ರಾಯಪಟ್ಟರು.
ಮಾಕೋನಹಳ್ಳಿಯಲ್ಲಿ ಶನಿವಾರ ಧರ್ಮಸ್ಥಳ ಯೋಜನೆಯ ಜ್ಞಾನ ವಿಜ್ಞಾನ ವಿಕಾಸ ಕೇಂದ್ರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ, ಉತ್ತಮ ಆರೋಗ್ಯ ದೊರಕಿದಾಗ ಜೀವನ ಸುಗಮವಾಗಲಿದೆ. ಕಷ್ಟಪಟ್ಟು ಸಂಪಾದಿಸಿದ ಹಣ ಉಳಿತಾಯ ಮಾಡುವುದನ್ನು ರೂಢಿಸಿಕೊಳ್ಳಲು ಧರ್ಮಸ್ಥಳ ಯೋಜನೆ ಮಹಿಳೆಯರಿಗೆ ನಿತ್ಯ ಸಲಹೆ ನೀಡುತ್ತಿರುವುದರಿಂದ ಕುಟುಂಬ ನಿರ್ವಹಣೆಯಲ್ಲಿ ತೊಡಕು ಉಂಟಾಗುತ್ತಿಲ್ಲ. ಜ್ಞಾನ ವಿಕಾಸ ಕೇಂದ್ರ ಬಡ ಕುಟುಂಬದವರಿಗೆ ವರದಾನವಾಗಿದೆ ಎಂದು ತಿಳಿಸಿದರು.
ಯೋಜನೆಯ ತಾಲೂಕು ಕಾರ್ಯನಿರ್ವಾಹಕ ಪಿ.ಶಿವಾನಂದ ಮಾತನಾಡಿ, ಧರ್ಮಸ್ಥಳ ಯೋಜನೆಯ ಅಭಿವೃದ್ಧಿ ಕಾರ್ಯ ಪ್ರತಿ ಗ್ರಾಮಕ್ಕೂ ತಲುಪಿದೆ. ಯೋಜನೆಯಿಂದ ಮಹಿಳೆಯರು ಸಂಘಟಿತರಾಗಿ ಮುನ್ನುಗ್ಗುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಮಹಿಳೆಯರಿಗೆ ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಮುಂದೆಬಂದ ನಂತರ ಸಮಾಜದಲ್ಲಿ ಸಾಕ್ಷರತೆ ಸಂಖ್ಯೆ ಹೆಚ್ಚಾಗಿದೆ ಎಂದರು.
ಪ್ರತಿ ಮನೆಗೆ ಶೌಚಗೃಹ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕ ಒದಗಿಸಲು ಗ್ರಾಮಾಭಿವೃದ್ಧಿ ಯೋಜನೆ ಅವಿರತವಾಗಿ ಶ್ರಮಿಸುತ್ತಿದೆ. ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದರೂ ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಪ್ರತಿ ಫಲಾನುಭವಿಗೂ ವಿವಿಧ ಸೌಲಭ್ಯ ಒದಗಿಸುತ್ತಿರುವುದಾಗಿ ತಿಳಿಸಿದರು.
ಆರೋಗ್ಯ ನಿರೀಕ್ಷಕ ದಿನೇಶ್, ಪೊಲೀಸ್ ಇಲಾಖೆಯ ಸುನಿಲ್, ಮಾಕೋನಹಳ್ಳಿ ಗ್ರಾಪಂ ಸದಸ್ಯ ಪ್ರಸನ್ನ, ಎಂ.ಎನ್.ಅಶ್ವತ್ಥ್, ಸೀತಮ್ಮ, ಭಾರತಿ, ಆಯಿಷಾ ಬಿಳಗುಳ ಇತರರಿದ್ದರು.