

ರೋಣ: ಮಹಿಳೆಯರ ಸಬಲೀಕರಣಕ್ಕೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರವಾಗಿದೆ ಎಂದು ಪುರಸಭೆ ಸದಸ್ಯ ಮಿಥುನ ಜಿ. ಪಾಟೀಲ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸಂಘ, ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳವಣಿಗೆ ಹೊಂದಬೇಕು ಎಂದರು.
ಧಗ್ರಾ ಯೋಜನೆ ಬಿ.ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಯೋಗೀಶ ಎ ಮಾತನಾಡಿ, 42 ವರ್ಷಗಳಿಂದ ಗ್ರಾಮಿಣ ಭಾಗದ ಅಭಿವೃದ್ಧಿಗಾಗಿ ಧರ್ಮಸ್ಥಳ ಸಂಸ್ಥೆ ಶ್ರಮಿಸುತ್ತಿದೆ. ಮಹಿಳೆಯರ ಆರ್ಥಿಕ ಬೆಳವಣಿಗೆಗೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 21 ಸಾವಿರ ಸ್ವ ಸಹಾಯ ಸಂಘಗಳಿದ್ದು. 1 ಲಕ್ಷ 80 ಸಾವಿರ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಗಿದೆ ಎಂದರು.
ರಾಜ್ಯದಲ್ಲಿ 14.5 ಸಾವಿರ ವೃದ್ದರಿಗೆ ಮಾಸಾಶನ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ ವಂಚಿತರಿಗೆ ಸೂರು ಒದಗಿಸಲಾಗಿದೆ. ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ 526 ಶುದ್ದ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದೆ. 1.5 ಲಕ್ಷ ಜನರನ್ನು ಮದ್ಯಪಾನ ಮುಕ್ತರನ್ನಾಗಿಸಿದ ಕೀರ್ತಿ ಸಂಸ್ಥೆಗಿದೆ. ಪ್ರತಿಯೊಂದ ತಾಲೂಕಿನಲ್ಲಿ 25 ಜ್ಞಾನವಿಕಾಸ ಕೇಂದ್ರಗಳನ್ನು ತೆರೆದು ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ ಎಂದರು.
ಸ್ಪಂದನಾ ಮಹಿಳಾ ಮಂಡಳ ಅಧ್ಯಕ್ಷೆ ಶಶಿಕಲಾ ಪಾಟೀಲ ಮಾತನಾಡಿದರು. ಹಿರಿಯ ವಕೀಲ ಎಲ್.ಎನ್. ಬಾಣದ, ಉಪನ್ಯಾಸಕಿ ಶಿಲ್ಪಾ ಗೌಡರ ಉಪನ್ಯಾಸ ನೀಡಿದರು. ಸುಧಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ ಅಧ್ಯಕ್ಷತೆ ವಹಿಸಿದ್ದರು. ಎ.ಎಸ್. ಅರಹುಣಸಿ, ಪ್ರವೀಣಕುಮಾರ ರಡ್ಡೇರ, ಡಾ. ವೀರೇಶ ಸತ್ತಿಗೇರಿ, ಮಹಾಬಲೇಶ್ವರ ಪಟಗಾರ ಇತರರಿದ್ದರು. ಸುನಂದಾ ಕಾತರಕಿ ನಿರೂಪಿಸಿದರು. ಮಹೇಶ ಸ್ವಾಗತಿಸಿದರು.