ಒತ್ತುವರಿ ತೆರವು, ಆಡಳಿತಕ್ಕೆ ಮರೆವು

4manju22-Web
ಬೆಳಗಾವಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಬಡಾವಣೆಯೊಂದನ್ನು ತೆರವುಗೊಳಿಸುತ್ತಿರುವುದು.
Published on

ಬೆಳಗಾವಿ: ಹಳ್ಳಿಗಳಲ್ಲಿ ಆಸ್ಪತ್ರೆ, ಶಾಲೆ, ಬಸ್ ನಿಲ್ದಾಣ ಇನ್ನಿತರ ಸಾರ್ವಜನಿಕ ಕೆಲಸಕ್ಕಾಗಿ ಮೀಸಲಿಟ್ಟಿರುವ ಸರ್ಕಾರಿ ಆಸ್ತಿಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ವರ್ಷಗಳೇ ಉರುಳಿದರೂ ಸಂಬಂಧಿತ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿಲ್ಲ.

ಜಿಲ್ಲಾ ಪಂಚಾಯಿತಿ ದಾಖಲೆಗಳ ಪ್ರಕಾರ 506 ಗ್ರಾಪಂ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 858 ಸರ್ಕಾರಿ ಆಸ್ತಿಗಳ ಪೈಕಿ 35 ಆಸ್ತಿಗಳನ್ನು ಮಾತ್ರ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇನ್ನುಳಿದ 823 ಆಸ್ತಿಗಳ ಒತ್ತುವರಿ ತೆರವುಗೊಂಡಿಲ್ಲ. ಅಲ್ಲದೆ, ಆಸ್ತಿಗಳಿಗೆ ತಂತಿ ಬೇಲಿ, ನಾಮಫಲಕ ಸೇರಿದಂತೆ ಯಾವುದೇ ಸಂರಕ್ಷಣಾ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸರ್ಕಾರಿ ಆಸ್ತಿಗಳು ಒತ್ತುವರಿಯಾಗುತ್ತಲೆ ಇದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಕೆಲ ಗ್ರಾಪಂಗಳ ವ್ಯಾಪ್ತಿಯಲ್ಲಿ 145ಕ್ಕೂ ಅಧಿಕ ಬಡವಾಣೆ ನಿರ್ಮಾಣಗೊಂಡಿವೆ. ಆದರೆ, ಇದರಲ್ಲಿ ಕೆಲ ಬಡಾವಣೆಗಳಿಗೆ ನೀಲಿನಕ್ಷೆಯೂ ಇಲ್ಲ. ಭೂ ಪರಿವರ್ತನೆ ಮಾಡದೆ ಬಡಾವಣೆ ನಿರ್ಮಿಸಿ, ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗಿದೆ. ಕೆಲ ಗ್ರಾಪಂ ಅಧಿಕಾರಿಗಳು ಎನ್‌ಎ ಆಗದ ಬಡಾವಣೆಗಳಿಗೂ ಮಾನ್ಯತೆ ಕೊಟ್ಟಿರುವ ಬಗ್ಗೆ ಹಾಗೂ ಇ-ಸ್ವತ್ತು ಮೂಲಕ ಉತಾರ್‌ಗಳನ್ನು ನಿಯಮ ಮೀರಿ ವಿತರಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಕ್ರಮ ಬಡಾವಣೆಗೂ ಮಾನ್ಯತೆ: ರಾಜ್ಯ ಸರ್ಕಾರವು ಭೂ ದಾಖಲೆಗಳ ಅಕ್ರಮ ತಪ್ಪಿಸಲು 2013ರಲ್ಲಿ ಇ-ಸ್ವತ್ತು ತಂತ್ರಾಂಶ ಜಾರಿಗೆ ತಂದಿದೆ. ಆದರೆ, 2013ಕ್ಕಿಂತ ಮೊದಲು ನಿರ್ಮಾಣವಾದ ಅಕ್ರಮ ಬಡಾವಣೆಗಳಿಗೆ 11ಬಿ ಮಾನ್ಯತೆ ಕೊಡಲು ಸರ್ಕಾರ ಅವಕಾಶ ನೀಡಿತ್ತು. ಎಲ್ಲ ದಾಖಲೆ ಸರಿ ಇದ್ದರೆ ಆಸ್ತಿ ಎಂದು ಪರಿಗಣಿಸುವ ನಮೂನೆ 9, ನಮೂನೆ 11ಎ ಮಾನ್ಯತೆ ನೀಡಲಾಗುತ್ತದೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ 2013ರ ನಂತರದ ಅಕ್ರಮ ಬಡಾವಣೆಗಳಿಗೂ ನಮೂನೆ 11ಬಿ ಮಾನ್ಯತೆ ಕೊಡಲಾಗಿದೆ. ಅಕ್ರಮ ಬಡಾವಣೆಗಳನ್ನೂ ಸಹ ಇ-ಸ್ವತ್ತು ತಂತ್ರಾಂಶದಲ್ಲಿ ಸೇರಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ನಷ್ಟ: ಭೂ ಪರಿವರ್ತನೆ ಮಾಡದೆ ಕೃಷಿ ಜಮೀನುಗಳಲ್ಲಿ ನಿವೇಶನ ನಿರ್ಮಿಸಿ ಅನೇಕರು ಮಾರಾಟ ಮಾಡಿದ್ದಾರೆ. ಇಂಥ ಮನೆಗಳಿಗೆ ಗ್ರಾಪಂಗಳು 11ಬಿ ಮಾನ್ಯತೆ ಪತ್ರ ಕೊಟ್ಟಿವೆ. ಇದರಿಂದಾಗಿ ಯೋಜನಾಬದ್ಧ ನಗರೀಕರಣ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಲ್ಲದೆ, ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ನಷ್ಟವಾಗುತ್ತಿದೆ.

ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿ ತೆರವುಗೊಳಿಸುವಂತೆ ಮತ್ತು ಆಸ್ತಿಗಳಿಗೆ ನಾಮಫಲಕ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈಗಾಗಲೇ ಭೂಮಿ ತಂತ್ರಾಂಶದಲ್ಲಿ ಸರ್ಕಾರಿ ಆಸ್ತಿಗಳನ್ನು ಸೇರಿಸಲಾಗುತ್ತಿದೆ.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

ಹಳ್ಳಿಗಳಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳ ತೆರವುಗೊಳಿಸಲಾಗುತ್ತಿದೆ. ಅಲ್ಲದೆ, ಇರುವ ಗ್ರಾಪಂಗಳ ಆಸ್ತಿಗಳು ಮತ್ತೆ ಒತ್ತುವರಿಯಾಗದಂತೆ ನಿಗಾ ವಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ.| ಎಚ್.ವಿ. ದರ್ಶನ ಜಿಪಂ ಸಿಇಒ

ಆಡಳಿತಗಾರರ ನಿರ್ಲಕ್ಷೃವೇ ಕಾರಣ

ಗ್ರಾಮೀಣ ಪ್ರದೇಶದಲ್ಲಿ ಕಂದಾಯ, ಸಣ್ಣ ನೀರಾವರಿ, ಅರಣ್ಯ ಇಲಾಖೆ ಹಾಗೂ ಗ್ರಾಪಂಗಳ ಒಡತನಕ್ಕೆ ಸೇರಿದ ಗ್ರಾಮಠಾಣಾ, ಸಾರ್ವಜನಿಕ ರಸ್ತೆ, ಕಾಲುವೆ, ಕೆರೆಗಳು, ಆಟದ ಮೈದಾನ, ಉದ್ಯಾನ, ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಜಾಗಗಳು, ಸ್ಮಶಾನಗಳು ಒತ್ತುವರಿಯಾಗುತ್ತಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆ, ಶುದ್ಧ ಕುಡಿಯುವ ನೀರಿನ ಘಟಕ, ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ಅನೇಕ ಸರ್ಕಾರಿ ಯೋಜನೆ ಅನುಷ್ಠಾನಗೊಳಿಸಲೂ ಜಾಗ ಸಿಗುತ್ತಿಲ್ಲ. ಆದರೂ ಜಿಲ್ಲಾಡಳಿತ ಒತ್ತುವರಿಯಾಗಿರುವ ಸರ್ಕಾರಿ ಜಾಗಗಳ ತೆರವು ಕಾರ್ಯ ಕೈಗೊಳ್ಳುತ್ತಿಲ್ಲ ಎಂದು ವಕೀಲ ಸುರೇಶ ಕುದರಿ, ಸುರೇಶ ಎಂ. ಪಾಟೀಲ ಆರೋಪಿಸಿದ್ದಾರೆ.

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net