

ತಿ.ನರಸೀಪುರ: ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನೌಕರರ ಬೇಡಿಕೆಗಳನ್ನ ಈಡೇರಿಸಲು ಆಗ್ರಹಿಸಿ ಅ.4ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಯದುನಾಡು ನಾಗರಾಜು ಹೇಳಿದ್ದಾರೆ.
ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ಥಳೀಯ ಸರ್ಕಾರವಾಗಿ ಆಡಳಿತ ಮಾಡಲು ಕಾನೂನಿನಲ್ಲೂ ಮುಕ್ತ ಅವಕಾಶವಿದ್ದರೂ ಉನ್ನತ ಮಟ್ಟದ ಅಧಿಕಾರಿಗಳು ಸದಸ್ಯರಿಗೆ ಆಡಳಿತ ಮಾಡಲು ಬಿಡುತ್ತಿಲ್ಲ. ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಶಾಸಕಾಂಗದಲ್ಲಿ ಕಾರ್ಯನಿರ್ವಹಿಸುವ ಜನಪ್ರತಿನಿಧಿಗಳ ಕೈಯಲ್ಲಿ ಪಂಚಾಯಿತಿಗಳು ಸಿಕ್ಕಿಹಾಕಿಕೊಂಡಿವೆ. ಹಾಗಾಗಿ ಸದಸ್ಯರು ಹಾಗೂ ನೌಕರರು ನಗಣ್ಯವಾಗಿದ್ದೇವೆ ಎಂದು ಹೇಳಿಕೆಯಲ್ಲಿ ಆರೋಪಿಸಿದರು.
ಪಂಚಾಯಿತಿ ಸದಸ್ಯರಿಗೆ ಅಧಿಕಾರ, ನೌಕರರಿಗೆ ಭದ್ರತೆ ಬೇಕು. ಅದಕ್ಕಾಗಿ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾಒಕ್ಕೂಟ ಮತ್ತು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರರ ಸಂಘದವರು ಒಟ್ಟಿಗೆ ಬೇಡಿಕೆ ಈಡೇರಿಕೆಗಾಗಿ ಹೋರಾಟವನ್ನು ನಡೆಸುತ್ತಿದ್ದೇವೆ ಎಂದು ಯದುನಾಡು ನಾಗರಾಜು ತಿಳಿಸಿದ್ದಾರೆ.