

ಬೆಂಗಳೂರು: ಆನ್ಲೈನ್ ಬ್ಯಾಂಕಿಂಗ್, ಶಾಪಿಂಗ್ ವಂಚನೆ ಬಳಿಕ ಜನರ ಬೆವರಿನ ಹಣದ (ಕಾರ್ವಿುಕರ ಭವಿಷ್ಯ ನಿಧಿ-ಇಪಿಎಫ್)ಮೇಲೂ ಸೈಬರ್ ಕಳ್ಳರ ಕಣ್ಣು ಬಿದ್ದಿದೆ. ಕಾರ್ವಿುಕ ಇಲಾಖೆ ನೌಕರರ ಅನುಕೂಲಕ್ಕಾಗಿ ಆನ್ಲೈನಲ್ಲೇ ಖಾತೆ ತೆರೆದು ವ್ಯವಹರಿಸಲು ವೆಬ್ಸೈಟ್ ಸವಲತ್ತು ಕಲ್ಪಿಸಿದ್ದರೆ, ಸೈಬರ್ ಕಳ್ಳರು ಈ ವೆಬ್ಸೈಟನ್ನೇ ನಕಲಿ ಮಾಡಿದ್ದಾರೆ. ಈ ಸುದ್ದಿ ಬಹಿರಂಗಗೊಳ್ಳುತ್ತಲೇ ಎಚ್ಚೆತ್ತ ಇಪಿಎಫ್ ಪ್ರಾದೇಶಿಕ ಕಚೇರಿ ಆಯುಕ್ತ ರಾಕೇಶ್ ಎಸ್. ಶೇಖರ್, ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಪಿಎಫ್ ವೆಬ್ಸೈಟ್ ಮೂಲಕ ಕಂಪನಿ ನೀಡುವ ಪಿಎಫ್ ಮೊತ್ತ ಮತ್ತು ಕಡಿತ ಮಾಡುವ ವೇತನ, ಬಡ್ಡಿ ದರದ ಮಾಹಿತಿ ಪಡೆಯುವ ಜತೆಗೆ ಖಾತೆದಾರರು ಕೂತಲ್ಲೇ ಹಣ ವಿತ್ಡ್ರಾ ಮಾಡಬಹುದಾಗಿದೆ. ಆದರೆ ಈ ವೆಬ್ಸೈಟ್ನಂತೆಯೇ ನಕಲಿ ವೆಬ್ಸೈಟ್ ಸೃಷ್ಟಿಸಿರುವ ಸೈಬರ್ ಕಳ್ಳರು ವಂಚನೆಗೆ ಬಲೆಬೀಸಿದ್ದಾರೆ. ಈ ನಕಲಿ ವೆಬ್ಸೈಟ್ನಲ್ಲಿ ಲಾಗಿನ್ ಆಗಲು ಯೂಸರ್ ಐಡಿ ನಮೂದಿಸಿ ಪಾಸ್ವರ್ಡ್ ಹಾಕಿದರೆ ಟೋಪಿ ಬೀಳುವುದು ಗ್ಯಾರಂಟಿ. ಈ ಪಾಸ್ವರ್ಡ್ ಬಳಸಿ ಇಪಿಎಫ್ ವೆಬ್ಸೈಟ್ನಲ್ಲಿ ಲಾಗಿನ್ ಆಗುವ ವಂಚಕರು ತಮ್ಮ ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ನಮೂದಿಸಿ ಕಾರ್ವಿುಕರ ಸೋಗಲ್ಲಿ ವಿತ್ಡ್ರಾಗೆ ಅರ್ಜಿ ಸಲ್ಲಿಸುತ್ತಾರೆ. ಸಂಬಂಧಪಟ್ಟ ಕಂಪನಿ ಗ್ರೀನ್ ಸಿಗ್ನಲ್ ತೋರಿಸಿದಾಗ ಹಣ ಕಳ್ಳರ ಬ್ಯಾಂಕ್ ಖಾತೆ ಸೇರುತ್ತದೆ. ಇದಲ್ಲದೆ ಕಾರ್ವಿುಕರ ಇಪಿಎಫ್ ಯೂಸರ್ ಐಡಿ ಬಳಸಿ ಲಾಗಿನ್ ಆದಾಗ ಬ್ಯಾಂಕ್ ಖಾತೆ, ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆದ ಮೊಬೈಲ್ ನಂಬರ್ ಕದಿಯುತ್ತಾರೆ. ಈ ಮಾಹಿತಿ ಬಳಸಿ ಬ್ಯಾಂಕ್ ಖಾತೆ, ವ್ಯಾಲೆಟ್, ಡಿಜಿಟಲ್ ಪೇಮೆಂಟ್ ಖಾತೆಗೂ ಕನ್ನ ಹಾಕುವ ಸಾಧ್ಯತೆಗಳಿವೆ.
ಮೊಬೈಲ್ಗೆ ಕರೆ ಮಾಡ್ತಾರೆ: ನಕಲಿ ವೆಬ್ಸೈಟ್ನಲ್ಲಿ ಮಾಹಿತಿ ಕದಿಯುವ ಜತೆಗೆ ಪಿಎಫ್ ಖಾತೆದಾರರ ಮೊಬೈಲ್ಗೆ ಇಪಿಎಫ್ ಅಥವಾ ಬ್ಯಾಂಕ್ ಅಧಿಕಾರಿಗಳ ಸೋಗಲ್ಲಿ ಕರೆ ಮಾಡುತ್ತಾರೆ. ‘ನಿಮ್ಮ ಇಪಿಎಫ್ ಖಾತೆಗೆ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಖಾತೆ ಲಿಂಕ್ ಮಾಡಬೇಕಾಗಿದೆ. ಬ್ಯಾಂಕ್ ಖಾತೆ ಮತ್ತು ಆಧಾರ್ ಮಾಹಿತಿ ನೀಡಿ. ಜತೆಗೆ ಮೊಬೈಲ್ಗೆ ಎಸ್ಎಂಎಸ್ ಬರುತ್ತದೆ. ಅದರಲ್ಲಿನ 4 ನಂಬರ್’(ಒಟಿಪಿ) ಹೇಳಿ’ ಎಂದು ಕೋರುತ್ತಾರೆ. ಗ್ರಾಹಕರು ಇದರ ಮಾಹಿತಿ ನೀಡಿದರೆ ಬ್ಯಾಂಕ್ ಖಾತೆ ಹಣ ಕಳ್ಳರ ಪಾಲಾಗುತ್ತದೆ.
ಪಿಎಫ್ ಖಾತೆದಾರರೇ ಹುಷಾರ್..:
- ಗೋವಿಂದರಾಜು ಚಿನ್ನಕುರ್ಚಿ