

ಹೊಸಪೇಟೆ: ರಾಜ್ಯದಲ್ಲಿ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಸಂಘಟನೆ ಪದಾಧಿಕಾರಿಗಳು ನಗರದ ತಹಸಿಲ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ಈಡಿಗರ ಮಂಜುನಾಥ್ ಮಾತನಾಡಿ, ಸ್ಥಳೀಯರಿಗೆ ಆದ್ಯತೆ ನೀಡಲು ಸರೋಜನಿ ಮಹಿಷಿ ವರದಿ ಜಾರಿ ಮಾಡಬೇಕು. ಲಕ್ಷಾಂತರ ಜನರು, ಪದವಿ ಉನ್ನತ ಶಿಕ್ಷಣ ಮುಗಿಸಿದರೂ ಉದ್ಯೋಗ ಸಿಗುತ್ತಿಲ್ಲ. ಅವರಿಗೆ ನಿರುದ್ಯೋಗ ಭತ್ಯೆ ನೀಡುವ ಕೆಲಸವೂ ಆಗಿಲ್ಲ. ಉದ್ಯೋಗದ ಹಕ್ಕು ಮೂಲಭೂತ ಹಕ್ಕಾಗಿ ಸಂವಿಧಾನದಲ್ಲಿ ಸೇರ್ಪಡೆ ಮಾಡಬೇಕು. ಈಗಾಗಲೇ ಹಲವು ದೇಶಗಳು ಇದನ್ನು ಜಾರಿ ಮಾಡಿವೆ ಎಂದರು.
ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್ ಮಾತನಾಡಿ, ಕೂಡಲೇ ಸರೋಜನಿ ಮಹಿಷಿ ವರದಿ ಜಾರಿ ಮಾಡಬೇಕು. ವರದಿ ಪ್ರಕಾರ ಡಿ ಗ್ರೂಪ್ ನೌಕರಿಯಲ್ಲಿ ಕನ್ನಡಿಗರಿಗೆ ಶೇ.100 ಹಾಗೂ ಉನ್ನತ ಹುದ್ದೆಯಲಿ ಶೇ.70 ಉದ್ಯೋಗ ಮೀಸಲಿಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಕಲ್ಯಾಣಯ್ಯ, ಕಾಲಿದ್ ಅಲ್ತಾಫ್, ರೆಹಮಾನ್, ಮಾಲತೇಶ್, ಶಿವಕುಮಾರ್, ಕೆ.ರಮೇಶ್, ಭಾಸ್ಕರ್ ರೆಡ್ಡಿ, ಮರಡಿ ಜಂಬನಾಯಕ ಇತರರಿದ್ದರು.