10 ವರ್ಷಗಳಿಂದ ಶೀಗಿಹಳ್ಳಿ ಸಿಂಗಾಪುರ ಗ್ರಾಪಂನಲ್ಲಿಲ್ಲ ಉದ್ಯೋಗ ಖಾತ್ರಿ

13 AKR 01
Published on

ಕಿರಣ ಹೂಗಾರ ಅಕ್ಕಿಆಲೂರ

ಉದ್ಯೋಗ ಖಾತ್ರಿ ಯೋಜನೆಯಿಂದ ಅಕ್ಕಿಆಲೂರ ಸಮೀಪದ ಶೀಗಿಹಳ್ಳಿ ಸಿಂಗಾಪುರ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ವಂಚಿತವಾಗಿವೆ. ಕಳೆದ 10 ವರ್ಷಗಳಿಂದ ಇಲ್ಲಿ ನರೇಗಾ ಕಾಮಗಾರಿಯನ್ನು ಆರಂಭಿಸಿಲ್ಲ. ಇದರಿಂದ ಸಾವಿರಕ್ಕೂ ಹೆಚ್ಚು ಕೂಲಿ ಕಾರ್ವಿುಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಶೀಗಿಹಳ್ಳಿ, ಸಿಂಗಾಪುರ, ಹಳೇ ಸಿಂಗಾಪುರ, ಕೊಡಿಯಲ್ಲಾಪುರ ಮತ್ತು ಶಂಕ್ರಿಕೊಪ್ಪ ಗ್ರಾಮಗಳನ್ನು ಒಳಗೊಂಡಿರುವ ಶೀಗಿಹಳ್ಳಿ ಸಿಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಹೊಂದಿರುವ ಒಂದು ಸಾವಿರಕ್ಕೂ ಹೆಚ್ಚು ಕೂಲಿ ಕಾರ್ವಿುಕರಿದ್ದಾರೆ. ಆದರೆ, ಅವರಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಬೇಕಾದ ಗ್ರಾಪಂ ಕಾಮಗಾರಿ ಆರಂಭಿಸದೆ ನಿರ್ಲಕ್ಷ್ಯ ತೋರಿದೆ.

ಅವಕಾಶವಿದ್ದರೂ ಆರಂಭಕ್ಕೆ ಮೀನಮೇಷ: ಶೀಗಿಹಳ್ಳಿ ಸಿಂಗಾಪುರ ಗ್ರಾಮದಲ್ಲಿ ನೀರು ಕಾಲುವೆ, ಹೊಂಡ ಮತ್ತು ಕೆರೆ, ಕೊಡಿಯಲ್ಲಾಪುರ ಗ್ರಾಮದಲ್ಲಿ ಒಂದು ಕೆರೆ, ಶಂಕ್ರಿಕೊಪ್ಪ ಗ್ರಾಮದಲ್ಲಿ ಹಿರೇಕೆರೆ, ಗಡ್ಲಗಟ್ಟಿಕೆರೆಗಳು ಹೂಳು ತುಂಬಿಕೊಂಡಿವೆ. ಗ್ರಾಪಂ ವ್ಯಾಪ್ತಿಯ ಕೆರೆ, ಹೊಂಡಗಳಲ್ಲಿನ ಹೂಳನ್ನು 10 ವರ್ಷಗಳಾದರೂ ತೆಗೆದಿಲ್ಲ. ಇವುಗಳನ್ನು ಹೂಳೆತ್ತಲು ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶವಿದೆ. ಇದರಿಂದಾಗಿ ಕೂಲಿ ಕಾರ್ವಿುಕರಿಗೆ ಉದ್ಯೋಗ ಒದಗಿಸಿದಂತಾಗುತ್ತದೆ. ಅಲ್ಲದೆ, ಹಾನಗಲ್ಲ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಏಪ್ರಿಲ್​ನಿಂದ ಮೇ ಮಾಸಾಂತ್ಯದವರೆಗೂ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಮಾಡಲಾಗುತ್ತಿದೆ. ಆದರೆ, ಶೀಗಿಹಳ್ಳಿ ಸಿಂಗಾಪುರದಲ್ಲಿ ಮಾತ್ರ ಈ ಯೋಜನೆ ಸಾಕಾರಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯಪ್ರವೃತ್ತರಾಗಿಲ್ಲ ಎಂದು ಕೂಲಿ ಕಾರ್ವಿುಕರು ಆರೋಪಿಸುತ್ತಾರೆ.

ಪ್ರತಿ ಕೆಲಸಕ್ಕೂ ಹಾರಿಕೆ ಉತ್ತರ: ವರದಾ ನದಿ ತಟದಲ್ಲಿರುವ ಶೀಗಿಹಳ್ಳಿ ಸಿಂಗಾಪುರ ಗ್ರಾಮದಲ್ಲಿ ಬಹುತೇಕರು ಕೂಲಿ ಕೆಲಸವನ್ನೇ ನಂಬಿದ್ದಾರೆ. ಅವರಿಗೆ ಕರೊನಾ ಲಾಕ್​ಡೌನ್​ನಂಥ ಈ ಸಮಯದಲ್ಲಿ ಕೆಲಸ ಸಿಗುತ್ತಿಲ್ಲ. ಪ್ರತಿ ವರ್ಷ ಈ ಅವಧಿಯಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿಕೊಂಡರೂ ಗ್ರಾಪಂ ಅಧ್ಯಕ್ಷರು, ಪಿಡಿಒ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಮೊದಲು ಕಾರ್ವಿುಕರು ಪರಸ್ಥಳಕ್ಕೆ ದುಡಿಯಲು ತೆರಳುತ್ತಿದ್ದರು. ಆದರೆ, ಈ ಬಾರಿ ಲಾಕ್​ಡೌನ್ ನಿಯಮಗಳ ಪರಿಣಾಮ ಅದೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಗ್ರಾಮದಲ್ಲಿ ಉದ್ಯೋಗ ಖಾತ್ರಿ ಅನಿವಾರ್ಯವಾಗಿದೆ. ಆದರೆ, ಪಿಡಿಒ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಸ್ಥಳೀಯ ಕಾರ್ವಿುಕರು ಅಳಲು ತೋಡಿಕೊಂಡಿದ್ದಾರೆ.

ನಮ್ಮ ಗ್ರಾಪಂನಲ್ಲಿ 10 ವರ್ಷಗಳಿಂದ ಸರಿಯಾಗಿ ನರೇಗಾ ಯೋಜನೆ ಜಾರಿಗೊಂಡಿಲ್ಲ. ಕಳೆದ ವರ್ಷ 22 ದಿನ ಮಾತ್ರ ಮಾಡಲಾಗಿತ್ತು. ಈಗ ಲಾಕ್​ಡೌನ್ ಇದೆ, ಕಾರ್ವಿುಕರಿಗೆ ಅನುಕೂಲವಾಗುತ್ತದೆ ಆರಂಭಿಸಿ ಎಂದರೆ ಕಂಪ್ಯೂಟರ್ ಸರಿಯಿಲ್ಲ. ಆಪರೇಟರ್ ಬಂದಿಲ್ಲ ಎಂದು ಪಿಡಿಒ ಸಬೂಬು ಹೇಳುತ್ತಿದ್ದಾರೆ. ಈಗಾಗಲೇ ಅಕಾಲಿಕ ಮಳೆಗಳು ಬೀಳುತ್ತಿದ್ದು ಕೆರೆ, ಹೊಂಡ ತುಂಬಿಕೊಡರೆ ಕೆಲಸ ಮಾಡುವುದು ಕಷ್ಟ. ಎಲ್ಲ ಕಾರ್ವಿುಕರ ಸಹಿ ಪಡೆದು ಸಂಸದ ಶಿವಕುಕುಮಾರ ಉದಾಸಿ ಅವರಿಗೆ ವರದಿ ಸಲ್ಲಿಸಿ, ಸಮಸ್ಯೆ ಪರಿಹಾರಕ್ಕೆ ಕೋರಲಾಗುವುದು.| ಮಲ್ಲೇಶ ಹಾಲಣ್ಣನವರ, ಶೀಗಿಹಳ್ಳಿ ಸಿಂಗಾಪುರ ಗ್ರಾಮಸ್ಥಎಂಎಂಆರ್ ಪ್ರಕ್ರಿಯೆ ಆರಂಭಿಸಿದ್ದೇವೆ. ಕ್ರಿಯಾಯೋಜನೆಯನ್ನು ತಾಪಂಗೆ ಕಳಿಸಲಾಗುವುದು. ಹಿಂದಿನ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈಗ ಕಂಪ್ಯೂಟರ್ ಸಮಸ್ಯೆ, ಆಪರೇಟರ್ ಬಾರದಿರುವುದರಿಂದ ನಿಧಾನವಾಗುತ್ತಿದೆ. ಒಟ್ಟು ಹೆಚ್ಚುವರಿ 200 ಕಾರ್ವಿುಕರ ಕೆಲಸ ಶೀಘ್ರ ಆರಂಭಿಸಲಾಗುವುದು.| ಶ್ರುತಿ ಸಾಂಗಳಾ, ಶೀಗಿಹಳ್ಳಿ ಸಿಂಗಾಪುರ ಪಿಡಿಒಹಾನಗಲ್ಲ ತಾಲೂಕಿನ 42 ಗ್ರಾಪಂಗಳಲ್ಲಿ ಶೀಗಿಹಳ್ಳಿ ಸಿಂಗಾಪುರ ಗ್ರಾಪಂನಲ್ಲಿ ನರೇಗಾ ಕುರಿತು ತಿಳಿವಳಿಕೆ ಕಡಿಮೆ ಇತ್ತು. ಆದರೆ, ಅಲ್ಲಿನ ಕಾರ್ವಿುಕರನ್ನು ಜಾಗೃತಗೊಳಿಸಿ ಸರ್ವೆ ಮಾಡಲಾಗಿದೆ. ಮೇ 12ಕ್ಕೆ 2 ಕಾಲುವೆ ಹೂಳು ತೆಗೆಯಲು ಅನುಮೋದನೆ ನೀಡಿದ್ದೇನೆ. ಗ್ರಾಪಂ ಪಿಡಿಒ ಅವರಿಂದ ಶೀಘ್ರ ವರದಿ ಪಡೆದು, ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು.| ಸುನೀಲಕುಮಾರ, ಹಾನಗಲ್ಲ ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net