

ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯಡಿ ದೇವದುರ್ಗ ತಾಲೂಕಿನಲ್ಲಿ ನಡೆದ ಅಕ್ರಮಕ್ಕೆ ಸಂಬಂಸಿದಂತೆ ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ನಾಲ್ವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಕ್ಯಾದಿಗ್ಗೇರಾ ಮತ್ತು ಕೊತ್ತದೊಡ್ಡಿ ಪಿಡಿಒ ಆಗಿದ್ದ ಸಿ.ಬಿ.ಪಾಟೀಲ್, ಗಾಣಧಾಳ ಮತ್ತು ಸೋಮನಮರಡಿ ಗ್ರಾ.ಪಂ. ಪಿಡಿಒ ಮಲ್ಲಪ್ಪ, ಕೆ.ಇರಬಗೇರಾ, ದೊಂಡಂಬಳಿ, ಜಾಲಹಳ್ಳಿ ಪಿಡಿಒ ಆಗಿದ್ದ ಪತ್ತೆಪ್ಪ ರಾಠೋಡ, ಶಾವಂತಗೇರ ಗ್ರಾ.ಪಂ. ಪಿಡಿಒ ಗುರುಸ್ವಾಮಿಯನ್ನು ಅಮಾನತ್ತುಗೊಳಿಸಲಾಗಿದೆ.
ಉದ್ಯೋಗ ಖಾತ್ರಿ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ದೇವದುರ್ಗ ತಾಲೂಕಿನ 33 ಗ್ರಾ.ಪಂ.ಗಳಲ್ಲಿ ಆರು ಪಂಚಾಯಿತಿಗಳಲ್ಲಿ ಅತಿ ಹೆಚ್ಚು ಖರ್ಚು ತೋರಿಸಲಾಗಿದ್ದು, ದಾಖಲೆ ನೀಡದಿರುವುದು ಹಾಗೂ ಕಳಪೆ ಕಾಮಗಾರಿ, ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಪಿಡಿಒಗಳು ಎದುರಿಸುತ್ತಿದ್ದಾರೆ.
ಕಳೆದ ತಿಂಗಳು ತಾ.ಪಂ. ಹಿಂದಿನ ಇಒ ಪಂಪಾಪತಿ ಹಿರೇಮಠ ಮತ್ತು ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರಾಗಿದ್ದ ಬಸ್ಸಣ್ಣ ನಾಯಕ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಈಗ ಪಿಡಿಒಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ.