

ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ವಿುಕರ ಪಾಲ್ಗೊಳ್ಳುವಿಕೆ ಶೇ. 50.15ಕ್ಕೆ ಹೆಚ್ಚಿಸುವಲ್ಲಿ ಲಕ್ಷ್ಮೇಶ್ವರ ತಾಲೂಕು ಪಂಚಾಯಿತಿ ಯಶಸ್ವಿಯಾಗಿದೆ.
ಮಹಿಳೆಯರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ತಾಪಂ ವತಿಯಿಂದ ಕೈಗೊಳ್ಳಲಾದ ವಿಶೇಷ ಮುತುವರ್ಜಿ ಮೆಚ್ಚುಗೆಗೆ ಪಾತ್ರವಾಗಿದೆ. ಖಾಸಗಿ ಕಾಮಗಾರಿ ಸೇರಿ ಇತರೆಡೆ ಮಹಿಳೆಯರು ದುಡಿದರೆ ನೀಡುವ ವೇತನದಲ್ಲಿ ತಾರತಮ್ಯವಿದೆ. ಪುರುಷರಿಗೆ ಕೊಡುವಷ್ಟು ಕೂಲಿ ಹಣವನ್ನು ಮಹಿಳಾ ಕಾರ್ವಿುಕರಿಗೆ ನೀಡುವುದಿಲ್ಲ. ಆದರೆ, ನರೇಗಾದಡಿ ಸಮಾನ ಕೂಲಿ ನಿಯಮವಿದೆ. ಹೀಗಿದ್ದರೂ ನರೇಗಾ ಕಾಮಗಾರಿಗಳಲ್ಲಿ ಮಹಿಳಾ ಕಾರ್ವಿುಕರ ಪಾಲ್ಗೊಳ್ಳುವಿಕೆ ಕಡಿಮೆ ಇದೆ. ಇದನ್ನು ಮನಗಂಡ ತಾಪಂ ಇಒ ಕೃಷ್ಣಪ್ಪ ಧರ್ಮರ, ಮಹಿಳೆಯರಿಗೆ ಹೆಚ್ಚೆಚ್ಚು ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿಸಲು ಎಲ್ಲ ಪಿಡಿಒ ಮತ್ತು ಪಂಚಾಯಿತಿ ಸಿಬ್ಬಂದಿಗೆ ನಿರ್ದೇಶನ ನೀಡಿದ್ದರಿಂದ ತಾಲೂಕಿನಲ್ಲಿ ಮಹಿಳಾ ಕಾರ್ವಿುಕರ ಪ್ರಮಾಣ ಸ್ವಲ್ಪ ಹೆಚ್ಚಿದೆ. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನರೇಗಾದಲ್ಲಿ ಸ್ತೀ-ಪುರುಷ ಎಂಬ ತಾರತಮ್ಯ ಇಲ್ಲದೇ ಪ್ರತಿ ಕುಟುಂಬಕ್ಕೆ 100 ದಿನ ಉದ್ಯೋಗ ಪಡೆಯಬಹುದಾಗಿದೆ. ಯೋಜನೆಯಡಿ ಒಂದು ದಿನದ ಕೂಲಿ ಹಣವಾಗಿ 349 ರೂ.ಗಳನ್ನು ನೀಡಲಾಗುತ್ತಿದೆ. ಸಮಾನ ವೇತನ ನೀತಿ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ಸಂದಾಯ ಇದ್ದರೂ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ವಿುಕರ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಪುರುಷರ ಕಾರ್ವಿುಕರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ. 46-47 ಮಾತ್ರ ಇತ್ತು. ಇದೀಗ ಉದ್ಯೋಗ ಖಾತ್ರಿಯತ್ತ ಮಹಿಳೆಯರನ್ನು ಸೆಳೆಯುವ ತಾಪಂ ಉದ್ದೇಶ ಸಾಕಾರವಾಗಿದೆ.
ಸ್ವಸಹಾಯ ಗುಂಪುಗಳ ನೆರವು
ಪಿಡಿಒ, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಗಣಕಯಂತ್ರ ನಿರ್ವಾಹಕರು, ಗ್ರಾಮ ಕಾಯಕ ಮಿತ್ರರು ಒಟ್ಟುಗೂಡಿ ಗ್ರಾಮಗಳಲ್ಲಿಯ ಮಹಿಳಾ ಸ್ವಸಹಾಯ ಗುಂಪುಗಳ ಸಹಯೋಗದಲ್ಲಿ ಸಭೆ ನಡೆಸಿ, ಉದ್ಯೋಗ ಖಾತ್ರಿಯ ಉದ್ದೇಶ ಮತ್ತು ಮಹತ್ವದ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಿಕೊಡಲಾಯಿತು. ಆ ಮೂಲಕ ಸಮುದಾಯ ಕಾಮಗಾರಿಗಳತ್ತ ಸ್ತ್ರೀಯರನ್ನು ಸೆಳೆಯುವ ಕಾರ್ಯ ಆರಂಭಿಸಲಾಯಿತು. ಕೆಲವು ಗ್ರಾಮಗಳಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಕೆಲಸ ಹಂಚಿಕೆ ಮಾಡಿಕೊಡಲಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ?
ತಾಲೂಕಿನ ಒಟ್ಟು ಮಹಿಳಾ ಪಾಲ್ಗೊಳ್ಳುವಿಕೆ ಪ್ರಮಾಣ ಶೇ. 50.15ರಷ್ಟಿದೆ. ಶಿಗ್ಲಿ ಗ್ರಾಪಂ ಶೇ. 55.99, ಆದರಹಳ್ಳಿ ಶೇ. 54.74, ಯಳವತ್ತಿ ಶೇ. 53.76, ಬಾಲೆಹೊಸೂರ ಶೇ. 50.95, ಗೋವನಾಳ ಗ್ರಾಪಂ ಶೇ. 50.04 ರಷ್ಟು ಮಹಿಳಾ ಪಾಲ್ಗೊಳ್ಳುವಿಕೆ ಇದ್ದು, ಮಾಢಳ್ಳಿ ಗ್ರಾಪಂ ಶೇ.43ರಷ್ಟಿದೆ. ಇನ್ನುಳಿದ ಪಂಚಾಯಿತಿಗಳು ಶೇ.50ರ ಆಸುಪಾಸಿನಲ್ಲಿವೆ.
ಖಾಸಗಿ ಕಾಮಗಾರಿಗಳಲ್ಲಿ ದುಡಿಯುವ ಮಹಿಳೆಯರಿಗೆ ಈ ಭಾಗದಲ್ಲಿ ಪುರುಷರಿಗೆ ನೀಡುವಷ್ಟು ಕೂಲಿ ನೀಡಲಾಗುವುದಿಲ್ಲ. ಆದರೆ, ನರೇಗಾದಡಿ ದುಡಿದರೆ ಸಮಾನ ವೇತನ ಸಿಗಲಿದೆ. ಆದರೂ ಹೆಚ್ಚು ಮಹಿಳೆಯರು ನರೇಗಾದಡಿ ದುಡಿಯಲು ಮುಂದೆ ಬರುತ್ತಿರಲಿಲ್ಲ. ಹಾಗಾಗಿ ಅವರಲ್ಲಿ ಯೋಜನೆ ಬಗ್ಗೆ ಅರಿವು ಮೂಡಿಸಿ, ಇತ್ತ ಸೆಳೆಯಲು ಯಶಸ್ವಿಯಾಗಿದ್ದೇವೆ. ವೈಯಕ್ತಿಕ ಕಾಮಗಾರಿಗಳಲ್ಲಿ ಹೆಚ್ಚು ಮಹಿಳೆಯರನ್ನು ತೊಡಗಿಸಲು ಕ್ರಮಕೈಗೊಳ್ಳಲಾಗುವುದು. | ಕೃಷ್ಣಪ್ಪ ಧರ್ಮರ, ತಾಪಂ ಇಒ, ಲಕ್ಷ್ಮೇಶ್ವರ