

ಮಂಗಳೂರು: ಮಹಿಳೆಯೊಬ್ಬರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2ಲಕ್ಷ ರೂ. ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜೆರಿ ಇಥಿಯಾಲ್ ಸಿಖಾ(32) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಲ್ಮಠದ ಎಸ್‌ಸಿಎಸ್ ಆಸ್ಪತ್ರೆ ಬಳಿ ಜಿರೇಹ್ ಪಾಥ್‌ವೇ ಅಬ್ರಾಡ್ ಎನ್ನುವ ಏಜೆನ್ಸಿ ಕಚೇರಿ ಮೂಲಕ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಎಂದು ಹೇಳಿ ನಿರುದ್ಯೋಗಿ ಯುವಕ, ಯುವತಿಯರಿಂದ ಹಣ ಪಡೆದು ವಂಚಿಸುತ್ತಿದ್ದ. ಏಪ್ರಿಲ್ ಮೊದಲ ವಾರದಲ್ಲಿ ಕಾವೂರು ನಿವಾಸಿ ನರ್ಸ್ ಒಬ್ಬರು ವಿದೇಶದಲ್ಲಿ ಉದ್ಯೋಗ ವಿಚಾರಿಸಿಕೊಂಡು ಈತನ ಕಚೇರಿಗೆ ಬಂದಿದ್ದರು. ಯೂರೋಪ್‌ನ ಲಿಥುವೇನಿಯಾ ದೇಶದಲ್ಲಿ ಕಚೇರಿ ಕೆಲಸಕ್ಕೆ ಸಂಬಂಧಿಸಿ ವರ್ಕಿಂಗ್ ವಿಸಾ ಇದೆ. ಅದಕ್ಕೆ 5.50 ಲಕ್ಷ ರೂ. ಪಾವತಿಸಬೇಕು. ತಿಂಗಳಿಗೆ 3.50 ಲಕ್ಷ ರೂ. ಸಂಬಳ ಎಂದು ತಿಳಿಸಿದ್ದ.
ಇದನ್ನು ನಂಬಿದ ಅವರು, ಚಿನ್ನಾಭರಣ ಅಡವಿಟ್ಟು 1 ಲಕ್ಷ ರೂ. ನಗದು ನೇರವಾಗಿ ಮತ್ತು 1 ಲಕ್ಷ ರೂ. ನೆಫ್ಟ್ ಮಾಡುವ ಮೂಲಕ ಕಚೇರಿ ಬ್ಯಾಂಕ್ ಖಾತೆಗೆ ಪಾವತಿಸಿದ್ದರು. ಈ ಕುರಿತು ಆತ್ಮೀಯರೊಬ್ಬರಲ್ಲಿ ವಿಚಾರಿಸಿದಾಗ, ಆತನ ಕಚೇರಿ ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಪಡೆಯದೆ ಅನಧಿಕೃತವಾಗಿ ವ್ಯವಹಾರ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಹಿಳೆ ಬಂದರು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧನ ವಿಚಾರ ತಿಳಿಯುತ್ತಿದ್ದಂತೆ ಆತನಿಂದ ವಂಚನೆಗೆ ಒಳಗಾಗ ಮತ್ತಿಬ್ಬರು ಸಂತ್ರಸ್ತರು ದೂರು ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ ತಿಳಿಸಿದ್ದಾರೆ.
ದೂರು ನೀಡಲು ಮನವಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ವಿದೇಶಾಂಗ ವ್ಯವಹಾರ ಸಚಿವಾಲಯದ ಅಂಗಸಂಸ್ಥೆ ವಲಸಿಗರ ರಕ್ಷಕ ಸಂಸ್ಥೆಯಿಂದ(Protector of Emigrants) ವಿದೇಶಿ ಉದ್ಯೋಗ ನೇಮಕಾತಿ ಏಜೆನ್ಸಿಗಳ ಅಧಿಕೃತ ಪಟ್ಟಿ ಬಿಡುಗಡೆಗೊಳಿದೆ. ಅವುಗಳನ್ನು ಹೊರತುಪಡಿಸಿ ಬೇರೆ ಸಂಸ್ಥೆಗಳು ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ವಿದೇಶಿ ಉದ್ಯೋಗದ ಆಮಿಷ ನೀಡಿ ವಂಚನೆ ಆಗಿದ್ದರೆ ನೇರವಾಗಿ ಪೊಲೀಸರಿಗೆ ದೂರು ನೀಡಬಹುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.