

ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು ಎಂದು ಕರ್ನಾಟಕ ವಿಕಾಸ ರಂಗ ಆಗ್ರಹಿಸಿದೆ.
ಕರ್ನಾಟಕದಲ್ಲಿ ರಿಯಾಯಿತಿ ದರದಲ್ಲಿ ನೆಲ, ಜಲ ಮತ್ತು ವಿದ್ಯುತ್ ಪಡೆದು ಲಾಭ ಗಳಿಸುತ್ತಿರುವ ಖಾಸಗಿ ಕಂಪನಿಗಳು, ಈ ನೆಲದ ಮಣ್ಣಿನ ಮಕ್ಕಳಿಗೆ ಉದ್ಯೋಗ ನೀಡುವುದಿಲ್ಲ ಎಂದು ಹೇಳುವುದು ಕನ್ನಡಿಗರಿಗೆ ಮಾಡಿದ ಅಪಮಾನ. ಕನ್ನಡದ ಮಕ್ಕಳು ಎಷ್ಟು ಪ್ರತಿಭಾವಂತರಿದ್ದಾರೆ ಎಂಬುದಕ್ಕೆ ವಿದೇಶಗಳಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವುದೇ ಸಾಕ್ಷಿ ಎಂದು ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ತಿಳಿಸಿದ್ದಾರೆ.
ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ದೇಶದಲ್ಲಿ ಮೊದಲು ಧ್ವನಿ ಎತ್ತಿದ ರಾಜ್ಯವೇ ಕರ್ನಾಟಕ. ಆದರೆ, ಈಗಾಗಲೇ ಕೇರಳ, ತಮಿಳುನಾಡು, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ ಮೊದಲಾದ ರಾಜ್ಯಗಳು ಸ್ಥಳೀಯರಿಗೆ ಮೀಸಲಾತಿ ನೀಡುತ್ತಿವೆ. ಇಲ್ಲಿ ಕನ್ನಡಿಗರ ದೌರ್ಭಾಗ್ಯ ಎಂಬಂತೆ ಮೀಸಲಾತಿ ನೀಡಲು ಖಾಸಗಿ ಮಾಲೀಕರ ಬೆದರಿಕೆಗೆ ಸರ್ಕಾರ ಹೆದರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾನು ಕನ್ನಡಿಗರ ಮುಖ್ಯಮಂತ್ರಿ ಎಂಬುದನ್ನು ಈಗ ಸಾಬೀತುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.