

ಸಿಂಧನೂರು: ಉದ್ಯೋಗ ಮೇಳಗಳಿಂದ ನಿರುದ್ಯೋಗ ಸಮಸ್ಯೆಗೆ ಮುಕ್ತಿ ಸಿಗುವಂತಾಗಬೇಕು ಎಂದು ಪ್ರಾಚಾರ್ಯ ಶಿವಯ್ಯ ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಂಪನಿಗಳನ್ನೊಳಗೊಂಡ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಹಲವು ಯುವಕ-ಯುವತಿಯರು ವಿದ್ಯೆ ಇದ್ದರೂ ಕೂಡ ಕೆಲಸ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅವರ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗದೆ ಇರುವುದು. ಯಾವ ಸಂಸ್ಥೆಯಾದರೂ, ಅವರ ಕೆಲಸದ ಅನುಭವ ಕೇಳುತ್ತದೆ. ಇಂಥ ಉದ್ಯೋಗ ಮೇಳದಿಂದ ನಿರುದ್ಯೋಗ ಸಮಸ್ಯೆ ಸ್ವಲ್ಪವಾದರೂ ಕಡಿಮೆಯಾಗಲಿದೆ ಎಂದರು.
ಕಾಲೇಜು ಸಿಡಿಸಿ ಸದಸ್ಯ ರಾಜೇಂದ್ರಕುಮಾರ್ ನಹರ್ ಮಾತನಾಡಿ, ಇಂದು ದೇಶ ಅನುಭವಿಸುತ್ತಿರುವ ಜ್ವಲಂತ ಸಮಸ್ಯೆ ನಿರುದ್ಯೋಗಕ್ಕೆ ಸೂಕ್ತವಾದ ಉತ್ತರವನ್ನು ಕಂಡುಕೊಳ್ಳುವಲ್ಲಿ ಉದ್ಯೋಗ ಮೇಳಗಳು ಉತ್ತಮವಾದ ಉದಾಹರಣೆಗಳಾಗಿವೆ. ಪ್ರತಿ ಕಾಲೇಜ್‌ಗಳಲ್ಲಿ ಕ್ಯಾಂಪಸ್ ಡ್ರೈವ್ ಆಯೋಜಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು ಎಂದರು. ಉದ್ಯೋಗ ಮೇಳದಲ್ಲಿ 438 ಯುವಕ-ಯುವತಿಯರು ಭಾಗವಹಿಸಿದ್ದರು.
ಸಹಾಯಕ ಪ್ರಾಧ್ಯಾಪಕ ಬಸವರಾಜ ತಡಕಲ್, ಕಾರ್ಯದರ್ಶಿ ಡಾ. ಸಂಗನಗೌಡ, ಸಿಡಿಸಿ ಸದಸ್ಯರಾದ ಬಸವರಾಜ, ಅಮರೇಶ ಇದ್ದರು.