ಇಂಜಿನಿಯರಿಂಗ್‌ನಲ್ಲಿ ಉದ್ಯೋಗ ದ್ವಿಗುಣ

mysore
Published on

ಮೈಸೂರು: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಉದ್ಯೋಗ ಅವಕಾಶಗಳ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎಂದು ಸಿಐಐ ಮೈಸೂರು ಉಪಾಧ್ಯಕ್ಷ ಹಾಗೂ ಎಟಿ ಆ್ಯಂಡ್ ಎಸ್ ಕಂಪನಿಯ ಹಿರಿಯ ನಿರ್ದೇಶಕ ಸಂತೋಷ್ ಗುಂಡಪಿ ಹೇಳಿದರು.


ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹಾಗೂ ಐಐಐ (ಕೈಗಾರಿಕೆ ಸಂಸ್ಥೆ ) ಮೈಸೂರು ವಲಯದ ಸಹಯೋಗದಲ್ಲಿ ನಗರದ ದಿ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ(ಎನ್‌ಐಇ) ಕೋರ್ ಇಂಜಿನಿಯರಿಂಗ್ ಶಾಖೆಗಳ ಕುರಿತು ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಕೌಶಲ ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಬಿಇ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಭವಿಷ್ಯದಲ್ಲಿ ಎಲೆಕ್ಟ್ರಾನಿಕ್‌ಗೆ ಸುವರ್ಣ ಯುಗ ಶುರುವಾಗಲಿದೆ. ಈ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಕೂಡ ಉತ್ತೇಜನ ಕೊಡುತ್ತಿದೆ. ಉದ್ಯೋಗಗಳು ವಿಫುಲವಾಗಿ ಸೃಷ್ಟಿಯಾಗುತ್ತವೆ. ಕೆಲಸ ಸಿಗಲ್ಲ ಎಂಬ ಮನೋಭಾವ ಬೆಳೆಸಿಕೊಳ್ಳಬೇಡಿ. ಅದನ್ನು ಪಡೆದುಕೊಳ್ಳಲು ಕಾರ್ಯಪ್ರವೃತ್ತರಾಗಬೇಕು ಎಂದರು.


ಸೆಮಿಕಂಡಕ್ಟರ್ ವಲಯದಲ್ಲಿ ಎಲೆಕ್ಟ್ರಾನಿಕ್ಸ್‌ನವರಿಗೆ ಮಾತ್ರವಲ್ಲದೆ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಸೇರಿದಂತೆ ಅನ್ವಯಿಕ ಶಾಖೆಗಳ ಜ್ಞಾನ ಹೊಂದಿರುವವರಿಗೂ ಅವಕಾಶಗಳು ತೆರೆದುಕೊಂಡಿವೆ ಎಂದರು.


ವಿದ್ಯಾರ್ಥಿಗಳಿಗೆ ಸಾಫ್ಟ್‌ವೇರ್ ಉದ್ಯಮದಲ್ಲಿರುವ ಅವಕಾಶಗಳ ಹೆಚ್ಚು. ಅವುಗಳನ್ನು ಬಳಸಿಕೊಳ್ಳಬೇಕು. ಜ್ಞಾನ, ವಿಷಯ ಮಂಡನೆಗೆ ಭಾಷೆ ಮುಖ್ಯವಲ್ಲ. ಕನ್ನಡದಲ್ಲಿ ಪರಿಣಾಮಕಾರಿ ವಿಷಯ ಮಂಡನೆ ಮಾಡಬಹುದು. ಭಾಷೆ ಮಾಧ್ಯಮ ಅಷ್ಟೇ. ಅದು ಜ್ಞಾನವಲ್ಲ ಎಂದರು.


ವರ್ತ್ ಎಲೆಕ್ಟ್ರಾನಿಕ್ ಮೈಸೂರು ಐಸಿಎಸ್ ಬಿಯು ಮುಖ್ಯಸ್ಥ ನಾಗರಾಜ್ ಅಯ್ಯಂಗಾರ್, ಸಿಐಐ ಉಪನಿರ್ದೇಶಕ ಸೊಲೊಮನ್ ಪುಷ್ಪರಾಜ್, ಧರ್ಮಪ್ರಸಾದ್, ಪ್ರಾಂಶುಪಾಲ ಡಾ.ರೋಹಿಣಿ, ಡೀನ್ ಪ್ರಸನ್ನ, ಉದ್ದಿಮೆದಾರ ಹರ್ಷ ಬಸವರಾಜ, ಅಮಿತ್ ಕುಮಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net