

ಹನೂರು: ಕ್ಷೇತ್ರ ವ್ಯಾಪ್ತಿಯ ಹೂಗ್ಯಂ ಗ್ರಾಮ ಪಂಚಾಯಿತಿಯೊಂದರಲ್ಲೇ 2500 ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಹೂಗ್ಯಂ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ನರೇಗಾ ಯೋಜನೆ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ 7 ಗ್ರಾಮಗಳಿದ್ದು, ಸುಮಾರು 2500ಕ್ಕೂ ಹೆಚ್ಚು ಜನರಿಗೆ ನರೇಗಾ ಯೋಜನೆಯಡಿ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ. ಈಗಾಗಲೇ ಕಳೆದ ಒಂದು ವಾರದಿಂದ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಡ್ಯಾಂನ ಕಾಲುವೆಗಳ ಹೂಳೆತ್ತುವ ಕಾಮಗಾರಿ, ರಸ್ತೆಬದಿಯ ಗಿಡಿಗಂಟಿಗಳ ತೆರವು, ಜಮೀನುಗಳ ರಸ್ತೆ ಅಭಿವೃದ್ಧಿ ಸೇರಿ ಹಲವು ಕಾಮಗಾರಿಗಳು ನಡೆಯುತ್ತಿವೆ ಎಂದರು.
ಇಲ್ಲಿನ ಕುಟುಂಬಗಳು ನರೇಗಾ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿರುವುದು ಮೆಚ್ಚುವ ಸಂಗತಿ. ಅಲ್ಲದೇ ಇತರೆಡೆಗೆ ಕೂಲಿಗಾಗಿ ತೆರಳಿದ್ದ ಸಾವಿರಕ್ಕೂ ಹೆಚ್ಚು ಜನರು ಕೆಲ ಗ್ರಾಮಗಳಿಗೆ ಹಿಂತಿರುಗಿದ್ದಾರೆ. ಸದ್ಯದಲ್ಲಿಯೇ ಅವರಿಗೂ ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುವುದು. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಪಿಡಿಒ ಪುಷ್ಪಲತಾ ಅವರಿಗೆ ಸೂಚಿಸಿದರು.
ಇದಕ್ಕೂ ಮುನ್ನಾ ಮಿಣ್ಯಂ ಗ್ರಾಪಂಗೆ ತೆರಳಿ ನರೇಗಾ ಯೋಜನೆಯ ಮಾಹಿತಿ ಪಡೆದ ಶಾಸಕರು, ಸ್ಥಳಕ್ಕೆ ತೆರಳಿ ಕಾಮಗಾರಿಯನ್ನು ಪರಿಶೀಲಿಸಿದರು. ಕಾರ್ಮಿಕರಿಗೆ ಮಾಸ್ಕ್ ವಿತರಿಸಿ ಪ್ರತಿಯೊಬ್ಬರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
11 ಸಾವಿರ ಕೂಲಿ ಕಾರ್ಮಿಕರ ಹೆಚ್ಚಳ: ಕ್ಷೇತ್ರ ವ್ಯಾಪ್ತಿಯಲ್ಲಿ 34 ಗ್ರಾಪಂಗಳಿದ್ದು, ಈಗಾಗಲೇ 30 ಗ್ರಾಪಂಗಳಿಗೆ ಭೇಟಿ ನರೇಗಾ ಯೋಜನೆಯಡಿಯ ಕಾಮಗಾರಿಯನ್ನು ಪರಿಶೀಲಿಸಲಾಗಿದೆ ಎಂದು ಶಾಸಕ ಆರ್.ನರೇಂದ್ರ ಹೇಳಿದರು.
ಪ್ರಾರಂಭದಲ್ಲಿ 34 ಗ್ರಾಪಂಗಳಿಂದ 3604 ಕೂಲಿ ಕಾರ್ಮಿಕರು ಕೆಸಲ ಮಾಡುತ್ತಿದ್ದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚು ಜನರಿಗೆ ಕೂಲಿ ನೀಡುವಂತೆ ಸೂಚನೆ ನೀಡಲಾಗಿತ್ತು. ಇದೀಗ ಕೂಲಿ ಕಾರ್ಮಿಕರ ಸಂಖ್ಯೆ 11,076 ಏರಿಕೆಯಾಗಿದೆ ಎಂದು ತಿಳಿಸಿದರು.
ಜಿಪಂ ಸದಸ್ಯ ಬಸವರಾಜು, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ತಾಪಂ ಇಒ ಪ್ರಕಾಶ್, ಪಿಡಿಒ ಮಾದೇಶ್ ಇನ್ನಿತರರಿದ್ದರು.