

ಮಳವಳ್ಳಿ: ಇತ್ತೀಚಿನ ದಿನಗಳಲ್ಲಿ ಸರ್ಕಾರದ ಕಾರ್ಯಕ್ರಮಗಳು ಹೆಚ್ಚಾಗುತ್ತಿರುವುದರಿಂದ ನೌಕರರಿಗೆ ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತಿದೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ತಾಲೂಕು ಸಂಘದಿಂದ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಸೇವಾ ಪುರಸ್ಕಾರ ಮತ್ತು ಹಾಸ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ಆರು ಕೋಟಿಗೂ ಅಧಿಕ ಜನಸಂಖ್ಯೆ ಇದ್ದು, ಅದರಲ್ಲಿ ಖಾಯಂ ನೌಕರರಾಗಿ ಸರಿಸುಮಾರು ಐದು ಲಕ್ಷ ಮಂದಿ ಸರ್ಕಾರಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ನಾವುಗಳು ಸಹ ಸರ್ಕಾರಿ ನೌಕರರಾಗಿರುವುದು ನಮ್ಮ ಭಾಗ್ಯ. ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ನೌಕರಿಯಲ್ಲಿ ಏರಿಳಿತ ಇರುವುದರಿಂದ ಭದ್ರತೆ ಇಲ್ಲದಂತಾಗಿದ್ದು, ಸರ್ಕಾರಿ ನೌಕರಿಯಲ್ಲಿ ಭದ್ರತೆ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ. ವಿವಿಧ ಇಲಾಖೆಗಳ ಕೆಲಸ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನೌಕರರು ಒಂದು ಕುಟುಂಬ ಇದ್ದಂತೆ ಎಂದರು. ಇದೇ ಸಂದರ್ಭದಲ್ಲಿ ಹಾಸ್ಯ ಕಲಾವಿದ ನಗೆಮಳೆ ಚಂದ್ರಾಜ್ ಹಾಸ್ಯ ಪ್ರಸಂಗಗಳ ಉಪನ್ಯಾಸ ನೀಡಿದರು.
ನಂತರ ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮುಖ್ಯಸ್ಥರು ಮತ್ತು ಅಧಿಕಾರಿ ವರ್ಗದವರಿಗೆ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ ವಹಿಸಿದ್ದರು.
ಗೌರವಾಧ್ಯಕ್ಷ ಎನ್.ಎಂ.ಪುಟ್ಟಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಬಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಶಿವಶಂಕರ್, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ವಿ.ಎಲ್.ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಚೇತನ್ ಕುಮಾರ್, ಸಮಾಜ ಸೇವಕ ಟಿ.ಎಂ.ಪ್ರಕಾಶ್, ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಎಂ.ಬೋರಯ್ಯ ಇದ್ದರು.