

ಯಳಂದೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಕರೆ ನೀಡಿರುವ ಪೌರ ನೌಕರರ ಅನಿರ್ದಿಷ್ಟಾವಧಿ ಧರಣಿಗೆ ಪಟ್ಟಣ ಪಂಚಾಯಿತಿಯ ನೌಕರರು ಬೆಂಬಲ ಸೂಚಿಸಿ ಮಂಗಳವಾರ ಪಪಂ ಮುಂಭಾಗ ಧರಣಿ ನಡೆಸಿದರು.
ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಯೋಜನೆಯಾದ ಜ್ಯೋತಿ ಸಂಜೀವಿನಿಯನ್ನು ಪೌರ ನೌಕರರಿಗೂ ವಿಸ್ತರಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಈಡೇರಿಸಬೇಕು, ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜುದಾರರು, ವಾಹನ ಚಾಲಕರು, ಲೋಡರ್‌ಗಳು, ಕ್ಲೀನರ್‌ಗಳು, ಸ್ವಚ್ಛತಾ ಮೇಲ್ವಿಚಾರಕರು, ಉದ್ಯಾನ ನಿರ್ವಹಣೆಗಾರರು ಸೇರಿದಂತೆ ವಿವಿಧ ವೃದ್ಧ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು, ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಟೈಮ್ ಸ್ಕೇಲ್ ನೌಕರರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ವಾಹನ ಚಾಲಕರು, ನೀರು ಪೂರೈಕೆ ನೌಕರರು, ನೇರ ಪಾವತಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು, ನೌಕರರಿಗೆ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು ಎಂದು ಒತ್ತಾಯಿಸಲಾಯಿತು.
ನೌಕರರಾದ ಜಯಲಕ್ಷ್ಮೀ, ಆರ್.ಸುರೇಶ್, ಮನೋಜ್, ಪರಶಿವಮೂರ್ತಿ, ಎಲ್.ರೇಖಾ, ಆರ್.ವಿಜಯ ಮಲ್ಲಿಕಾರ್ಜುನಸ್ವಾಮಿ, ಲಕ್ಷ್ಮೀ, ರಘುಪತಿ, ಜಗದೀಶ್, ಸಂತೋಷ್, ಮಾದೇಶ್, ಆಮಾಸೆ, ನಾಗರಾಜು, ಆರ್ಯಮ್ಮ, ಬಿ.ಸಿ.ಮಂಜುನಾಥ್, ಗಣೇಶ್, ಸುರೇಶ್, ರಾಮು, ಬಿಳಿಗಿರಿ, ರಂಗಸ್ವಾಮಿ, ಕುಮಾರ, ಮಂಜುನಾಥ, ಶೋಭಾ, ಶಾಂತಿ, ನಾಗಮ್ಮ, ಬಣ್ಣಮ್ಮ ಇತರರು ಇದ್ದರು.