

ಬೆಂಗಳೂರು: ಬಿಬಿಎಂಪಿ ಸಹಿತ ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳಲ್ಲಿ ಅಧಿಕಾರಿ/ನೌಕರರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮಂಗಳವಾರ ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ನಾಗರಿಕರು ಪಾಲಿಕೆ ಸೇವೆಗಳನ್ನು ಪಡೆಯಲು ಪರದಾಡಿದರು. ಬೇಡಿಕೆ ಈಡೇರುವ ಭರವಸೆ ದೊರೆಯದ ಕಾರಣ ಬುಧವಾರವೂ ಕರ್ತವ್ಯಕ್ಕೆ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಹಾನಗರ ಪಾಲಿಕೆಗಳ ನೌಕರರ ಸಂಘಗಳ ಪರಿಷತ್ ನಿಲುವು ಕೈಗೊಂಡಿದೆ.
ಭಾರಿ ಮಳೆಯ ಕಾರಣ ಸಾರ್ವಜನಿಕರಿಗೆ ಪರಿಹಾರ ಒದಗಿಸಲು ಅಡ್ಡಿ ಮಾಡಬಾರದೆಂಬ ಕಾರಣಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ/ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸಂಘ ಸ್ಪಷ್ಟಪಡಿಸಿದೆ.
ಮಂಗಳವಾರ ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ವಿವಿಧ ಪಾಲಿಕೆಗಳ ಸಾವಿರಾರು ಅಧಿಕಾರಿ/ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬೇಡಿಕೆ ಈಡೇರಿಸುವಂತೆ ಕೈಯಲ್ಲಿ ಫಲಕ ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಅಹವಾಲು ಆಲಿಸಲು ಯಾವುದೇ ಸಚಿವ, ಹಿರಿಯ ಅಧಿಕಾರಿ ಸ್ಥಳಕ್ಕೆ ಆಗಮಿಸದ ಕಾರಣ ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರ ಹೊರತಾಗಿಯೂ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹಾಗೂ ಪೌರಾಡಳಿತ ಇಲಾಖೆಯ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.
ಮುಖ್ಯ ಆಯುಕ್ತರಿಂದ ಅಹವಾಲು ಆಲಿಕೆ:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಸಂಘವು ನೀಡಿದ ಬೇಡಿಕೆಗಳ ಮನವಿಪತ್ರವನ್ನು ಪಡೆದು, ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಈಗಾಗಲೇ ಬಿಬಿಎಂಪಿಯಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಿದ್ದು, ಇದೇ ಮಾದರಿಯಲ್ಲಿ ಇತರ ಪಾಲಿಕೆಗಳಲ್ಲಿರುವ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ ಪರಿಹಾರ ಕೊಡಿಸುವ ಆಶ್ವಾಸನೆ ನೀಡಿದರು.
ಈ ಭರವಸೆಗೆ ವಿಜಯಪುರ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆ ಸಂಘಗಳ ಪದಾಧಿಕಾರಿಗಳು ಆಕ್ಷೇಪಿಸಿದ್ದಕ್ಕೆ, ಒಕ್ಕೂಟದ ಅಧ್ಯಕ್ಷ ಅಮೃತ್‌ರಾಜ್ ಅವರು ಮಂಗಳೂರು ಹೊರತುಪಡಿಸಿ ಉಳಿದ ಪಾಲಿಕೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದರು. ಆ ಬಳಿಕ ಸಂಜೆ ವೇಳೆ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಬಿಬಿಎಂಪಿ, ಮೈಸೂರು, ಹುಬ್ಬಳ್ಳಿ-ಧಾರವಾಡ, ತುಮಕೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ, ಬೆಳಗಾವಿ ಮಹಾನಗರ ಪಾಲಿಕೆಯ ನೌಕರರು ಪಾಲ್ಗೊಂಡಿದ್ದರು.
ನೌಕರರ ಸಂಘದ ಗೌರವಾಧ್ಯಕ್ಷ ಎಸ್.ಎಚ್.ಗುರುಮೂರ್ತಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಪದಾಧಿಕಾರಿಗಳಾದ ಜಿ.ವೆಂಕಟ್‌ರಾಮ್, ಬಿ.ಎನ್.ವೇಣುಗೋಪಾಲ್, ಟಿ.ಸಿ.ಬಸವರಾಜಯ್ಯ, ಪ್ರಹಾದ್ ಕುಲಕರ್ಣಿ, ರಾಜ್ಯ ನಿರ್ದೇಶಕರಾದ ಸಾಯಿಶಂಕರ್, ಎಸ್.ಜಗದೀಶ್, ಎ.ಜಿ.ಬಾಬು, ಶ್ರೀನಿವಾಸ್ ಕಟ್ಟಿ, ಪಿ.ಬಾಬು, ಕೆ.ನರಸಿಂಹ, ಶಾಂತಪ್ಪ ಮುಖೇಶಪ್ಪ ಪತ್ತಾರ, ರವೀಂದ್ರ ಶಿರಶ್ಯಾದ ಹಾಗೂ ವಿವಿಧ ಪಾಲಿಕೆ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿಬಿಎಂಪಿಯಲ್ಲಿ ಪ್ರತಿಭಟನೆ ಇಲ್ಲ:
ರಾಜ್ಯದ ವಿವಿಧ ಪಾಲಿಕೆಗಳಲ್ಲಿ ನೌಕರರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದರೂ, ಬಿಬಿಎಂಪಿಯಲ್ಲಿ ಎಂದಿನಂತೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಬಿಬಿಎಂಪಿಗೆ ಪ್ರತ್ಯೇಕ ನಿಯಮಾವಳಿ ಇರುವುದರಿಂದ ನಮ್ಮ ಬೇಡಿಕೆಗಳಲ್ಲಿ ಹೆಚ್ಚಿನವು ಈಡೇರಿವೆ. ಹಾಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿ/ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್ ತಿಳಿಸಿದ್ದಾರೆ.
ಏಳನೇ ವೇತನ ಆಯೋಗ, ವೃಂದ ನೇಮಕಾತಿ ಮಾರ್ಪಡು ಮಾಡಿ ಮುಂಬಡ್ತಿ ನೀಡಲು ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗಿದೆ. ಬೇಡಿಕೆಗಳ ಪೈಕಿ 5ಅನ್ನು ಈಡೇರಿಸಲಿದ್ದು, ಹಣಕಾಸು ಇಲಾಖೆಯ ಅನುಮೋದನೆ ಕೋರಲಾಗಿದೆ. ಉಳಿದ ಬೇಡಿಕೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು.
- ಪ್ರಭುಲಿಂಗ ಕವಳಿಕಟ್ಟಿ, ಪೌರಾಡಳಿತ ಇಲಾಖೆಯ ನಿರ್ದೇಶಕ
ನಮ್ಮ ಹೋರಾಟ ಅಧಿಕಾರಿಗಳ ವಿರುದ್ದ ಅಲ್ಲ. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದ್ದೇವೆ. ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸದಿರುವುದು ನೌಕರರಿಗೆ ಬೇಸರವಾಗಿದೆ. ಬುಧವಾರ ಮಂಗಳೂರು ಹೊರತುಪಡಿಸಿ ಉಳಿದ ಪಾಲಿಕೆಗಳಲ್ಲಿ ನೌಕರರು ಸಾಮೂಹಿಕ ರಜೆ ಹಾಕಿ ಕರ್ತವ್ಯದಿಂದ ಹೊರಗುಳಿಯಲಿದ್ದಾರೆ. ಬಿಬಿಎಂಪಿಲ್ಲಿ ನಮ್ಮ ಬೇಡಿಕೆಗೆ ಉತ್ತಮ ಸ್ಪಂದನೆ ದೊರೆತಿರುವುದರಿಂದ ಪ್ರತಿಭಟನೆ ಇರುವುದಿಲ್ಲ.
- ಎ.ಅಮೃತ್ ರಾಜ್, ಮಹಾನಗರ ಪಾಲಿಕೆಗಳ ರಾಜ್ಯಾಧ್ಯಕ್ಷ