ನೌಕರರು ಸಂಬಳ ಪ್ಯಾಕೇಜ್​ ಖಾತೆ ಮಾಡಿಸಲಿ

3 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರಿ ನೌಕರರಿಗೆ ಆಪತ್ಕಾಲದಲ್ಲಿ ಆರ್ಥಿಕ ಸಹಾಯ ಮತ್ತು ಬ್ಯಾಂಕಿನ ಸೌಲಭ್ಯಗಳನ್ನು ಉಚಿತವಾಗಿ ಪಡೆಯಲು ರಾಜ್ಯ ಸರ್ಕಾರಿ ಸಂಬಳ ಪ್ಯಾಕೇಜ್​ ಖಾತೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ನೌಕರರು ಸಂಬಳ ಪ್ಯಾಕೇಜ್​ ಖಾತೆ ಹೊಂದಬೇಕು. ಈ ಕುರಿತು ಆಯಾ ಇಲಾಖೆ ಜಿಲ್ಲಾ ಮುಖ್ಯಸ್ಥರು ಖಾತೆಯ ಕ್ರಮ ವಹಿಸಿ ಏಪ್ರಿಲ್​ ಅಂತ್ಯದೊಳಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್​ ಖಾತೆ ಹಾಗೂ ಸರ್ಕಾರಿ ನೌಕರರ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಬ್ಯಾಂಕರ್ಸ್​ ಮತ್ತು ವಿವಿಧ ಇಲಾಖೆಗಳ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ನೌಕರ ತನ್ನ ಸಂಬಳ ಖಾತೆಯನ್ನು ಸ್ಯಾಲರಿ ಪ್ಯಾಕೇಜ್​ ಅಕೌಂಟ್​ ಮಾಡಿಸಿದರೆ ಉಚಿತವಾಗಿ 1 ಕೋಟಿ ರೂ. ಮೊತ್ತದ ವಿಮೆ ಲಭ್ಯವಾಗುತ್ತದೆ. ಪ್ರತಿ ಇಲಾಖೆ ಬಟವಡೆ ಅಧಿಕಾರಿಗಳು ನೇರವಾಗಿ ಸಂಬಂಧಿಸಿದ ಬ್ಯಾಂಕ್​ ಅಧಿಕಾರಿ ಸಂಪರ್ಕಿಸಿ ಖಾತೆ ಹೊಂದಲು, ಸಂಬಳ ಪ್ಯಾಕೇಜ್​ ಖಾತೆಯಾಗಿ ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರಿಕೃತ ವ್ಯವಸ್ಥೆ ಮಾಡಲಾಗಿದೆ ಎಂದರು.

ಲೀಡ್​ ಬ್ಯಾಂಕ್​ ವ್ಯವಸ್ಥಾಪಕ ಪ್ರಭುದೇವ ಎನ್​.ಎಂ. ಅವರು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು, ಎಸ್​ಬಿಐ ಬ್ಯಾಂಕ್​ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಎಸ್​.ಭಟ್ಟ, ಬ್ಯಾಂಕ್​ ಆಫ್ ಬರೋಡಾ ಅಧಿಕಾರಿ ಚಿನ್ನಾರಾವ್​ ಮತ್ತು ಕೆನರಾ ಬ್ಯಾಂಕ್​ ಅಧಿಕಾರಿ ಶಿವಾನಂದ ಎ. ಸಂಬಳ ಪ್ಯಾಕೇಜ್​ ಖಾತೆ ಯೋಜನೆ ವಿವರಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಗಾಳಿ, ಕೃಷಿ, ಕಂದಾಯ, ಆರೋಗ್ಯ, ನಗರ ಸ್ಥಳಿಯ ಸಂಸ್ಥೆಗಳು, ಪಂಚಾಯತ ರಾಜ್​, ಲೋಕೋಪಯೋಗಿ, ವಿವಿಧ ಇಲಾಖೆ, ನಿಗಮ, ಮಂಡಳಿಗಳ ಅ-ಕಾರಿಗಳು ಇದ್ದರು.

ಜಿಲ್ಲಾ ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್​ ದೇಸಾಯಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net