

ಮಡಿಕೇರಿ: ಸಾರ್ವಜನಿಕರಿಂದ ದೂರು ಬರದಂತೆ ಗಮನಹರಿಸುವುದು ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಎಂದು ಲೋಕಾಯುಕ್ತ ಡಿವೈಎಸ್‌ಪಿ ವಿ.ಕೃಷ್ಣಯ್ಯ ಸಲಹೆ ಮಾಡಿದರು.
ನಗರದ ತಹಶೀಲ್ದಾರ್ ಅವರ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಅವರು ಮಾತನಾಡಿ, ಕಾನೂನು ಬದ್ಧವಾಗಿ ಸರ್ಕಾರದ ನಿಯಮಾನುಸಾರ ಕೆಲಸಗಳನ್ನು ಮಾಡಬೇಕು. ಸಾರ್ವಜನಿಕರ ಕೆಲಸ ಆಗದಿರುವುದಕ್ಕೆ ಹಿಂಬರಹ ನೀಡಬೇಕು. ಸಾರ್ವಜನಿಕರಿಂದ ದೂರುಗಳು ಬಂದಾಗ ತಕ್ಷಣವೇ ಸ್ಪಂದಿಸಬೇಕು ಎಂದು ಹೇಳಿದರು.
ಸಾರ್ವಜನಿಕರು ಮಾಹಿತಿ ಕೇಳಿದಾಗ ಮಾಹಿತಿ ನೀಡುವುದು ಮೊದಲ ಆದ್ಯತೆ ಆಗಬೇಕು. ಮಾಹಿತಿ ನೀಡದೆ ಶತಾಯಿಸುವುದು ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ. ಆದ್ದರಿಂದ ಯಾವುದೇ ಪತ್ರಕ್ಕೆ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿವರ್ಷ ಆಸ್ತಿದಾಯಕ ಪಟ್ಟಿ ಸಲ್ಲಿಸಬೇಕು. ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರದ ನಾಮಫಲಕ ಅಳವಡಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಖಲಾತಿಗಳನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದು ವಿ.ಕೃಷ್ಣಯ್ಯ ಸೂಚಿಸಿದರು.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಕೆಲವು ಹೋಂ ಸ್ಟೇಗಳಿಗೂ ಪರವಾನಗಿ ನೀಡಲಾಗಿದೆ. ಈ ಸಂಬಂಧ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಶ್ರೀಮಂತರು ಸಹ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಅರ್ಹ ಬಡವರಿಗೆ ಬಿಪಿಎಲ್ ಪಡಿತರ ಚೀಟಿ ತಲುಪಿಸಬೇಕು ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಕೇಶ್ ಅವರು ಸಲಹೆ ಮಾಡಿದರು.
ಕಂದಾಯ ನಿಗಧಿ, ಭೂಮಿಗೆ ಸಂಬಂಧಿಸಿದ ದಾಖಲೆ ಒದಗಿಸುವುದು. ರಸ್ತೆ ನಿರ್ಮಾಣಕ್ಕೆ ಜಾಗ ಬಿಡಿಸುವುದು ಮತ್ತಿತರ ವಿಚಾರಗಳ ಕುರಿತು ಅರ್ಜಿಗಳು ಸಲ್ಲಿಕೆಯಾದವು.
ತಹಶೀಲ್ದಾರ್ ಪ್ರವೀಣ್ ಕುಮಾರ್‌ರವರು ಕಂದಾಯ ಇಲಾಖೆ ದೂರುಗಳಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.