ಕೆಲಸದಿಂದ ತೆಗೆದು ಹಾಕಿದಕ್ಕೆ ಕಚೇರಿಗೆ ಬೆಂಕಿ ಹಚ್ಚಿದ ಉದ್ಯೋಗಿಗಳು

tire shop burnt in honnavara.
Published on

ಬೆಂಗಳೂರು: ಕೆಲಸದಿಂದ ವಜಾಗೊಳಿಸಿದ್ದಕ್ಕೆ ಆಕ್ರೋಶಗೊಂಡ ಉದ್ಯೋಗಿಗಳು ಕಂಪನಿಯ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಪುಟ್ಟೇನಹಳ್ಳಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಸುಮಾರು ೧೧ ಲಕ್ಷ ರೂ. ಮೌಲ್ಯದ ಪೀಠೋಪಕರಣಗಳಿಗೆ ಹಾನಿಯಾಗಿದೆ.
ಪುಟ್ಟೇನಹಳ್ಳಿಯ ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಈ ಘಟನೆ ನಡೆದಿದ್ದು, ಕಂಪನಿಯ ರಾಹುಲ್ ಪೂಜಾರಿ ಮತ್ತು ಲ್ಯಾವ್ಸನ್ ಪೀಟರ್ ಜಾನ್ ಎಂಬ ಉದ್ಯೋಗಿಗಳ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಉಮಾಶಂಕರ್ ಮತ್ತು ರೂಪಾ ಎಂಬುವರ ಒಡೆತನದ ಪೃಥ್ವಿ ಪಾರ್ಕ್ ಸ್ಕ್ವೇರ್ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ರಾಹುಲ್, ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿದ್ದರು. ಲ್ಯಾವ್ಸನ್ ಪೀಟರ್ ಜಾನ್, ರೀಜಿನಲ್ ಸೇಲ್ಸ್ ಮ್ಯಾನೇಜರ್ ಆಗಿದ್ದರು. ವ್ಯವಹಾರದ ಗುರಿ (ಬ್ಯೂಸಿನೆಸ್ ಟಾರ್ಗೆಟ್) ಸಾಧಿಸದ ಕಾರಣಕ್ಕೆ ಈ ಇಬ್ಬರನ್ನು ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಲಾಗಿತ್ತು. ಅಲ್ಲದೆ, ಅವರಿಗೆ ಸಂಬಳ ಸಹ ಕೊಟ್ಟಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಹುಲ್ ಮತ್ತು ಲ್ಯಾವ್ಸನ್ ಅವರು ಕಂಪನಿಯ ರೂಪಾ ಅವರಿಗೆ ಕರೆ ಮಾಡಿ ಸಂಬಳ ಕೊಡುವಂತೆ ಕೇಳಿದ್ದರು. ಆದರೆ, ರೂಪಾ ಮತ್ತು ಉಮಾಶಂಕರ್ ಸಂಬಳ ಕೊಡಲು ನಿರಾಕರಿಸಿದ್ದರು. ಇದರಿಂದ ಮತ್ತಷ್ಟು ಆಕ್ರೋಗೊಂಡಿದ್ದ ರಾಹುಲ್ ಮತ್ತು ಲ್ಯಾವ್ಸನ್, ಸೆ.೨೭ರಂದು ಬೆಳಗ್ಗೆ ಕಚೇರಿಗೆ ಬಂದು ಹೌಸ್ ಕೀಪಿಂಗ್ ಕೆಲಸದವರನ್ನು ಹೊರಗೆ ಕಳುಹಿಸಿದ್ದರು. ನಂತರ ಕಂಪನಿಗೆ ಏಕಾಏಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ್ದಾರೆ. ಘಟನೆಯಲ್ಲಿ ಕಂಪನಿಯ ಗೋಡೆ, ಕಂಪ್ಯೂಟರ್ ಟೇಬಲ್, ಸ್ವಿಚ್ ಬೋರ್ಡ್, ಪೀಠೋಪಕರಣಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net