

ಮಡಿಕೇರಿ: ವಸತಿ ಶಾಲೆಗಳ ಖಾಯಂ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘ, ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಪ್ರತಿಭಟನಾ ನಿರತರು ರಾಜ್ಯ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿ.ಅಲೋಕ್, ಖಾಯಂ ಬೋಧಕ-ಬೋಧಕೇತರ ಸಿಬ್ಬಂದಿಗಳ ಶ್ರಮದಿಂದ ಪ್ರತಿ ಭಾರಿ ಉತ್ತಮ ಫಲಿತಾಂಶ ಬರುತ್ತಿದೆ. ನವೋದಯ ವಿದ್ಯಾಲಯ ಮತ್ತು ಶಿಕ್ಷಣ ಇಲಾಖೆಯ ಶಾಲೆಗಳ ಸಿಬ್ಬಂದಿಗಳಿಗೆ ದೊರೆಯುವ ಹಲವು ಸೌಲಭ್ಯಗಳು ಕ್ರೈಸ್ ಖಾಯಂ ನೌಕರರಿಗೆ ಸಿಗುತ್ತಿಲ್ಲ. ಆದರೂ, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರೆ. ಆದರೆ, ನಮಗೆ ಹಿಡಿಗಂಟು, ಜ್ಯೋತಿ ಸಂಜೀವಿನಿ ಸೇರಿದಂತೆ ಇತರೆ ವ್ಯವಸ್ಥೆಯಿಲ್ಲ. ಇವುಗಳನೆಲ್ಲ ನಮಗೂ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಸರ್ಕಾರ ಈ ಕೂಡಲೇ ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಅಥವಾ ಎಸ್ಸಿ-ಎಸ್ಟಿ, ಬಿಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡಬೇಕು. ಖಾಯಂ ನೌಕರರಿಗೆ ಜ್ಯೋತಿ ಸಂಜೀವಿನಿ ಅನುಷ್ಟಾನಗೊಳಿಸಬೇಕು. ಮರಣ ಮತ್ತು ನಿವೃತ್ತಿ ಉಪಧಾನ ಸೌಲಭ್ಯ ಒದಗಿಸಬೇಕು. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯತಿ ನೀಡಬೇಕು. ಖಾಯಂ ನೌಕರರಿಗೆ ಶೇ.೧೦ ವಿಶೇಷ ಭತ್ಯೆ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ರಾಜ್ಯಾದ್ಯಂತ ೮೨೧ ವಸತಿ ಶಾಲೆ/ಕಾಲೇಜುಗಳು ಕಾರ್ಯನಿರ್ವಹಿಸುತ್ತಿದೆ. ೨ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿಯುತ ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಪ.ಜಾತಿ, ಪ.ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ರಾಜ್ಯದ್ಯಂತ ಸುಮಾರು ೬೮೦೦ಕ್ಕಿಂತ ಅಧಿಕ ಖಾಯಂ ನೌಕರರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಪ್ರತಿ ವರ್ಷವೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಸತಿ ಶಾಲೆ ವಿದ್ಯಾರ್ಥಿಗಳು ಮೇಲುಗೈ ಸಾಧಿಸುತ್ತಿದ್ದು ರಾಜ್ಯಮಟ್ಟದಲ್ಲಿ ಪ್ರಥಮ, ದ್ವಿತೀಯ ರ‌್ಯಾಂಕ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಹಿಂದೆ ಸಿಬ್ಬಂದಿಗಳ ಅವಿರತ ಪರಿಶ್ರಮವಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಿದಂಬರ, ಖಜಾಂಚಿ ಎಂ.ಆರ್.ಮೀನಾ, ಸಹಕಾರ್ಯದರ್ಶಿ ಎಚ್.ಆರ್.ಷಡಕ್ಷರಿ, ತಾಲೂಕು ಕಾರ್ಯದರ್ಶಿಗಳಾದ ಕೆ.ಸಂತೋಷ್ ಕುಮಾರ್, ಕೆ.ವಿ.ಅಮೃತ್, ತಾಂತ್ರಿಕ ಕಾರ್ಯದರ್ಶಿ ಪಿ.ಕೆ.ಆಶಿಫ್, ದಿಲನ್ ಸೇರಿದಂತೆ ಮತ್ತಿತರರಿದ್ದರು.