ಸರ್ಕಾರಿ ಅಧಿಕಾರಿ ನಿಂದನೆ ಖಂಡಿಸಿ ನೌಕರರ ಪ್ರತಿಭಟನೆ

raichur
raichur
Published on

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮೇ 22 ರಂದು ಆಹಾರ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಅವರ ಮೇಲೆ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಸಾರ್ವಜನಿಕರ ಎದುರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕೈಗೊಂಡು, ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.

ನಂತರ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿಗೆ ಮನವಿ ಸಲ್ಲಿಸಿದರು. ಮಾನ್ವಿ ತಾಲ್ಲೂಕಿನಲ್ಲಿ ಜೋಳ ಖರೀದಿ ಸಂಬಂಧ ರೈತರು ಹೋರಾಟವನ್ನು ಮಾಡುತ್ತಿರುವಾಗ ಜಿಲ್ಲಾಧಿಕಾರಿಗಳ ಆದೇಶದಂತೆ ಆಹಾರ ಇಲಾಖೆಯ ಡಿಡಿ ಕೃಷ್ಣ ಪ್ರತಿಭಟನಾ ಸ್ಥಳಕ್ಕೆ ತೆರಳಿ ರೈತರ ಮನವಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಸಾರ್ವಜನಿಕರ ಎದುರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸಿರುತ್ತಾರೆ. ಇದರಿಂದ ನೌಕರರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ನೌಕರರು, ತಾಲ್ಲೂಕು ಹಂತದ ಅಧಿಕಾರಿಗಳು ಮತ್ತು ನೌಕರರು ಸರ್ಕಾರದ ನಿಯಮಾವಳಿಗಳಂತೆ ಉತ್ತಮವಾದ ಕೆಲಸ ಕಾರ್ಯಗಳು ಮಾಡುತ್ತಿದ್ದರು ಸಹ ಕೆಲವೊಂದು

ಸಂಘ ಸಂಸ್ಥೆಯವರು ಅನಗತ್ಯವಾಗಿ ಪ್ರತಿಭಟನೆ ಹಾಗೂ ಅನಾಮದೆ ದೂರಿನ ಹೆಸರಿನಲ್ಲಿ ನೌಕರರಿಗೆ ಕಿರುಕುಳ ನೀಡುತ್ತಾ, ಪದೇ ಪದೇ ಇಂತಹ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿ ಇದನ್ನು ನೌಕರರ ಸಂಘವು ತೀವ್ರವಾಗಿ ಖಂಡಿಸುತ್ತದೆ.

ಅಲ್ಲದೇ ಪೂರಕ ದಾಖಲೆಗಳಲ್ಲದೇ ಕೇವಲ ದೂರು ಆಧಾರದ ಮೇಲೆ ಸರ್ಕಾರಿ ನೌಕರರಿಗೆ ಕಿರುಕುಳ ನೀಡುತ್ತಿರುವುದನ್ನು ತಪ್ಪಿಸಿ ಸದರಿಯವರೆಲ್ಲರ ಮೇಲೆ ಸ ಕ್ರಮಕೈಗೊಂಡು ಸರ್ಕಾರಿ ನೌಕರರು ನಿರ್ಭಯದಿಂದ

ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಾ, ಪ್ರಮುಖರಾದ ಶಂಕರಗೌಡ ಪಾಟೀಲ್, ಭೀಮೇಶ, ಮಲ್ಲೇಶ ಭಂಡಾರಿ, ಚಂದ್ರಶೇಖರ ರೆಡ್ಡಿ, ಆಂಜನೇಯ್ಯ, ರಾಜವರ್ಧನ ರೆಡ್ಡಿ, ಮಲ್ಲಿಕಾರ್ಜುನ, ಮಹಾದೇವ ಪಾಟೀಲ್, ಯಂಕಪ್ಪ ಪಿರಂಗಿ, ಹನುಮಂತ್ರಾಯ, ಧನಲಕ್ಷ್ಮೀ, ಛಾಯಾದೇವಿ, ಮಹೇಶ್ವರಿ, ವೈ.ಕೆ.ಯಶೋದಾ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net