ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಶಂಭುಗೌಡ ಅಧ್ಯಕ್ಷ: ಉಪಾಧ್ಯಕ್ಷರಾಗಿ ಡಿ.ಜೆ.ಈಶ್ವರ್ ಅವಿರೋಧವಾಗಿ ಆಯ್ಕೆ

Employees Housing Cooperative Society Elections Mandya
Published on

ಮಂಡ್ಯ: ಮೈಸೂರು-ಬೆಂಗಳೂರು ವಿಭಾಗೀಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಶಂಭುಗೌಡ ಹಾಗೂ ಉಪಾಧ್ಯಕ್ಷರಾಗಿ ಡಿ.ಜೆ.ಈಶ್ವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಸರ್ಕಾರಿ ನೌಕರರ ಸಂಘದ ಕಚೇರಿ ಆವರಣದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ಎಲ್ಲ 17 ನಿರ್ದೇಶಕರು ಎಸ್.ಶಂಭುಗೌಡ ಹಾಗೂ ಡಿ.ಜೆ.ಈಶ್ವರ್ ಅವರನ್ನು ಅವಿರೋಧವಾಗಿ ಆಯ್ಕೆಗೊಳಿಸಿ ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ತ್ಯಾಗರಾಜ್ ಪ್ರಸಾದ್, ಸಹಾಯಕ ಚುನಾವಣಾಧಿಕಾರಿಯಾಗಿ ಚಿಕ್ಕಣ್ಣ ಕಾರ್ಯನಿರ್ವಹಿಸಿದರು.

ಬಳಿಕ ಮಾತನಾಡಿದ ಅಧ್ಯಕ್ಷ ಎಸ್.ಶಂಭುಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷನಾದ ನನ್ನನ್ನು ಮೈಸೂರು-ಬೆಂಗಳೂರು ವಿಭಾಗೀಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಎಲ್ಲ ನಿರ್ದೇಶಕರು ವಿಶ್ವಾಸ ಪೂರ್ವಕವಾಗಿ ಮರು ಆಯ್ಕೆಮಾಡಿ ಹೆಚ್ಚಿನ ಜವಾಬ್ದಾರಿ ಹೊರಿಸಿದ್ದಾರೆ. ಎಲ್ಲರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈಗಾಗಲೇ ಮೈಸೂರಿನಲ್ಲಿ 7 ಎಕರೆ 6 ಗುಂಟೆ ಜಾಗ ಖರೀದಿಸಿ ಅದರ ಶೇ.60ರಷ್ಟು ನಿವೇಶನ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರಿ, ಅರೆಸರ್ಕಾರಿ ನೌಕರರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ನಮ್ಮ ನೌಕರರು ಒಂದು ಮನೆಕಟ್ಟಿ, ಮದುವೆ ಮಾಡುವಷ್ಟರಲ್ಲೇ ಹೈರಾಣಾಗಿರುತ್ತಾರೆ. ಅವರಿಗೆ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸವುದು ಹಾಗೂ ಬಡಾವಣೆ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆ ನನ್ನದು. ಹಾಗಾಗಿ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.ನನ್ನನ್ನು ಸಂಘದ ಅಧ್ಯಕ್ಷನಾಗಿ ಮರು ಆಯ್ಕೆಗೊಳಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ನಿರ್ದೇಶಕರಾದ ಕೆ.ಗೋಪಾಲ್, ಎನ್.ಆರ್.ದರ್ಶನ್, ಎಚ್.ಎಸ್.ಕೃಷ್ಣ, ಸಿ.ಗುಣಶೇಖರ್, ಕೆ.ಕೃಷ್ಣ, ಜೆ.ಭರತ್‌ರಾಜ್, ಆರ್.ವಿ.ಪ್ರಸನ್ನ, ತಮ್ಮೇಗೌಡ, ಸುಚೇತಾ, ಮಲ್ಲಿಕಾರ್ಜುನಯ್ಯ, ರಂಗಸ್ವಾಮಿ, ಟಿ.ಕೃಷ್ಣಯ್ಯ, ಶಿವಕುಮಾರಸ್ವಾಮಿ, ಬಿ.ಎಸ್.ಪದ್ಮಾ, ಎಸ್.ಶಿಲ್ಪಶ್ರೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net