ಬಿಎಲ್‌ಒ ಜವಾಬ್ದಾರಿಯಿಂದ ಕೈ ಬಿಡಿ, ನೌಕರರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ

NOUKARARA SANGHA MANAVI TO DC BLO
ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರಿಗೆ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ನೇತೃತ್ವದಲ್ಲಿ ಮನಸಿ ಸಲ್ಲಿಸಲಾಯಿತು. ಉಪಾಧ್ಯಕ್ಷ ರಾಜಶೇಖರ್ ದೈವಾಡಿ, ಎಸ್.ಡಿ. ಪೂಜಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಪಾಲಕರು, ಮೇಲ್ವಿಚಾರಕರಿಗೆ ನೀಡಿರುವ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಜವಾಬ್ದಾರಿಯಿಂದ ಕೈಬಿಡಲು ಆಗ್ರಹಿಸಿ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರಿಗೆ ಮನವಿ ಸಲ್ಲಿಸಲಾಯಿತು.

ವಸತಿ ನಿಲಯಗಳಲ್ಲಿ ಪ್ರತಿ ದಿನ ಸಂಜೆ 6 ರಿಂದ 7 ರವರೆಗೆ ಮಿಷನ್ ವಿದ್ಯಾಪುರ ಕಾರ್ಯಕ್ರಮದಡಿ ನಡೆಯುವ ಆನ್ ಲೈನ್ ತರಗತಿಗೆ ಹಾಜರಾಗುವುದು, ಪ್ರತಿದಿನ 3 ಬಾರಿ ವಿದ್ಯಾರ್ಥಿಗಳಿಗೆ ಸಂಖ್ಯೆಗೆ ಅನುಗುಣವಾಗಿ ಆಹಾರ ಸಾಮಗ್ರಿಗಳನ್ನು ವಿತರಿಸುವುದು, ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಸ್ಪೋಕನ್ ಇಂಗ್ಲಿಷ್ ತರಗತಿ ಮೇಲ್ವಿಚಾರಣೆ ಮಾಡುವುದು, ಪ್ರತಿ ತಿಂಗಳು ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ ಮಾಡಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳು ನಿಲಯ ಪಾಲಕರು ಮತ್ತು ಮೇಲ್ವಿಚಾರಕರ ಮೇಲಿವೆ.

ಪ್ರತಿ ದಿನ ಬೆಳಗ್ಗೆ ಮಕ್ಕಳಿಗೆ ಪ್ರಾರ್ಥನೆ, ಯೋಗ ನಡೆಸಿಕೊಡಬೇಕಿದೆ. ಆಯುಕ್ತರ ಆದೇಶದ ಪ್ರಕಾರ ನಮ್ಮ ಶೈಕ್ಷಣಿಕ ಪದವಿಗನುಗಣವಾಗಿ ಬೆಳಗ್ಗೆ 8.30 ರಿಂದ 10.30 ವರೆಗೆ ಪಾಠ ಬೋಧನೆ ಮಾಡುವುದು, ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಖಾತೆಗೆ ಜಮೆ ಆಗದಿರುವ ಪಕ್ಷದಲ್ಲಿ ಶಾಲಾ -ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಖಾತೆಗೆ ಆಧಾರ್ ಶೀಡಿಗ್ ಮಾಡಿಸುವುದು ನಿಲಯ ಪಾಲಕರ ಕರ್ತವ್ಯವಾಗಿದೆ. ಇಲಾಖೆಯ ನಿಲಯ ತಂತ್ರಾಂಶದಲ್ಲಿ ಪ್ರತಿ ದಿನ 3 ಹೊತ್ತು ಜಿಪಿಎಸ್ ಫೋಟೋ ಅಪಲೋಡ್ ಮಾಡುವುದು ದೈನಂದಿನ ಕರ್ತವ್ಯ ಆಗಿದೆ. ಸದ್ಯ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಇರುವ ಸಿಬ್ಬಂದಿ ಮೇಲೆಯೇ ಹೆಚ್ಚಿನ ಜವಾಬ್ದಾರಿ ಇದೆ. ಹೀಗಾಗಿ ಮತಗಟ್ಟೆ ಅಧಿಕಾರಿ ನೇಮಕದಿಂದ ಕೈ ಬಿಡಬೇಕೆಂದು ಮನವಿ ಮಾಡಿದರು.

ಸಂಘದ ಹಿರಿಯ ಉಪಾಧ್ಯಕ್ಷ ರಾಜಶೇಖರ್ ದೈವಾಡಿ, ಎಸ್.ಡಿ. ಪೂಜಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net