ನೌಕರ ಆತ್ಮಹತ್ಯೆ, ಎಫ್ ಐ ಆರ್ ದಾಖಲು ವೇಳೆ ರಾಜಕೀಯ ಒತ್ತಡ?

IMG_20250808_131145.jpg
Published on

ಚಿಕ್ಕಬಳ್ಳಾಪುರ: ಜಿ.ಪಂ.ಸಿಇಒ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ನಾಯಕರು ಕುಟುಂಬ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿದರ ಆರೋಪಗಳು ಕೇಳಿ ಬಂದಿವೆ.
ಡೆತ್‌ ನೋಟು ಬರೆದು ಜಿಲ್ಲಾಡಳಿತ ಭವನದ ಆವರಣದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ವಾಂತನ ಹೇಳುವ ನೆಪದಲ್ಲಿ ರಾಜಕೀಯ ನಾಯಕರು ಮೃತನ ಕುಟುಂಬಸ್ಥರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ.
ಬಾಬುವಿನ ಬಳಿ ಹಣವನ್ನು ಪಡೆದುಕೊಂಡು ವಂಚಿಸಿದವರ ವಿರುದ್ಧ ದೂರು ಸಲ್ಲಿಸಬೇಕು. ಇದರಲ್ಲಿ ಸಂಸದ ಡಾ ಕೆ.ಸುಧಾಕರ್‌ ಹೆಸರು ಸೇರಿಸುವುದು ಬೇಡ. ನಿಮಗೆ ನ್ಯಾಯ ಸಿಗುವವರೆಗೂ ಜತೆಯಲ್ಲಿರಲಾಗುವುದು ಎಂದು ಬಿಜೆಪಿ ನಾಯಕರು ಕುಟುಂಬದ ಸದಸ್ಯರಿಗೆ ಭರವಸೆ ನೀಡುವ ಮೂಲಕ ಮನವೊಲಿಕೆಗೆ ಯತ್ನಿಸಿದ್ದಾರೆ.
ಇದರ ನಡುವೆ ಸಂಸದ ಡಾ ಕೆ.ಸುಧಾಕರ್‌ ಅವರ ಕಡೆಯವರಿಂದ ಅನ್ಯಾಯವಾಗಿದೆ. ಮನೆಯ ಯಜಮಾನ ಬಲಿಯಾಗಿದ್ದಾನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದೂರು ಸಲ್ಲಿಸಿ, ಸುಧಾಕರ್‌ ಹೆಸರು ಬಿಡಬೇಡಿ ಎಂದು ಕಾಂಗ್ರೆಸ್‌ ನಾಯಕರು ಸಲಹೆ ನೀಡಿದ್ದಾರೆ.

*ಎಫ್‌ ಐ ಆರ್‌ ದಾಖಲು ಒತ್ತಡ*
ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಅಧಿಕಾರಿಗಳ ಮೇಲೆ ಪರೋಕ್ಷವಾಗಿ ಒತ್ತಡ ಹೇರುವ ಕೆಲಸ ಮಾಡಿದರು.
ಕೇವಲ ನಾಗೇಶ್‌ ಹಾಗೂ ಮಂಜುನಾಥ್‌ ವಿರುದ್ಧ  ಮೃತನ ಪತ್ನಿ ದೂರು ನೀಡಲು ಮುಂದಾಗಿದ್ದರು. ಆದರೆ, ಪೊಲೀಸರು ಸುಧಾಕರ್‌ ಹೆಸರು ಸೇರಿಸಲು ಒತ್ತಡ ಹೇರಿ, ಮತ್ತೊಂದು ದೂರು ಪತ್ರ ಬರೆಯಲು ಹೇಳಿದ್ದಾರೆ ಎಂದು ಬಿಜೆಪಿ ಆರೋಪಿಸಿದರೆ, ಡೆತ್‌ ನೋಟ್‌ ನಲ್ಲಿ ಬರೆದಿರುವಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲೇಬೇಕು ಎಂದು ಕಾಂಗ್ರೆಸ್‌ ಒತ್ತಡ ಹೇರಿದೆ. ರಾಜಕೀಯ ನಾಯಕರ ತಲೆ ನೋವು ಮಾತುಗಳಿಗೆ ಹೈರಾಣರಾದ ಪೊಲೀಸರು ಎಫ್‌ ಐ ಆರ್‌ ದಾಖಲಿಸುವಲ್ಲಿ ವಿಳಂಬ ಧೋರಣೆ ಪ್ರದರ್ಶಿಸಿದರು. ಸಂಬಂಧಪಟ್ಟವರ ಹೇಳಿಕೆಗಳ ಸ್ವೀಕಾರ, ಸ್ಥಳ ಮಹಜರ್‌ ಸೇರಿದಂತೆ ನಿಯಮಾನುಸಾರ ಹಲವು ಪ್ರಕ್ರಿಯೆಗಳನ್ನು ಮುಗಿಸಲಾಗುತ್ತದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

*ಮುಂಜಾನೆಯೇ ಕಚೇರಿಗೆ ಬಂದ ಚಾಲಕ*
ಗುರುವಾರ ಮುಂಜಾವ ೫ ಕ್ಕೆ ಕಾರಿನಲ್ಲಿ ಚಾಲಕ ಜಿಲ್ಲಾಡಳಿತ ಭವನಕ್ಕೆ ಬಂದಿದ್ದಾನೆ. ಒಳ ಪ್ರವೇಶಿಸುವ ಸಂದರ್ಭದಲ್ಲಿ ಸಾಹೇಬರು ಬೇಗ ಬರಲು ಹೇಳಿದ್ದಾರೆ. ಎಲ್ಲಿಗೋ ಹೋಗಬೇಕು. ಇದಕ್ಕೆ ಬಂದಿರುವೆ ಎಂಬುದಾಗಿ ಭದ್ರತಾ ಸಿಬ್ಬಂದಿಗೆ ಚಾಲಕ ತಿಳಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಡಳಿತ.ಭವನದ ಆವರಣದಲ್ಲಿ ಕಾರನ್ನು ನಿಲ್ಲಿಸಿ, ಕಟ್ಟಡದ ಹಿಂಭಾಗ ಹೋಗಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಬೆಳಿಗ್ಗೆ ೮ ರ ವೇಳೆ ಸ್ವಚ್ಛತಾ ಸಿಬ್ಬಂದಿ ಸುತ್ತಾಡುವಾಗ ಮೃತದೇಹ ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೌಕರನ ಆತ್ಮಹತ್ಯೆ, ಕೇಳಿ ಬಂದ ಗಂಭೀರ ಆರೋಪಗಳು ಆಡಳಿತ ಯಂತ್ರಾಂಗವನ್ನು ಬೆಚ್ಚಿ ಬೀಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net