ನೌಕರ ಆತ್ಮಹತ್ಯೆ: ರಾಜಕೀಯ ಜಟಾಪಟಿಗೆ ಕಾರಣವಾದ ಪ್ರಕರಣ!

IMG_20250808_130123.jpg
Published on

ಚಿಕ್ಕಬಳ್ಳಾಪುರ: ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಕಾರು ಚಾಲಕ ಬಾಬು ಆತ್ಮಹತ್ಯೆಯು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಡೆತ್‌ ನೋಟ್‌ ನಲ್ಲಿ ಹೆಸರಿಸಲಾಗಿರುವ ಸಂಸದ ಡಾ ಕೆ.ಸುಧಾಕರ್‌, ಜಿ.ಪಂ.ಲೆಕ್ಕಾಧಿಕಾರಿ ಕಚೇರಿಯ ಸಹಾಯಕ ಗುಮಾಸ್ತ ಮಂಜುನಾಥ್‌, ಚಿಕ್ಕಕಾಡಿಗೇನಹಳ್ಳಿಯ ಎನ್‌ ಎನ್‌ ಆರ್‌ ನಾಗೇಶ್‌ ವಿರುದ್ಧ ಎಫ್‌ ಐ ಆರ್‌ ದಾಖಲಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಮತ್ತೊಂದೆಡೆ ಆತ್ಮಹತ್ಯೆ ಪ್ರಕರಣದಲ್ಲಿ ದುರುದ್ದೇಶ ಪೂರ್ವಕವಾಗಿ ಡಾ ಕೆ.ಸುಧಾಕರ್‌ ಹೆಸರು ಸೇರಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. 

*ಕಾಂಗ್ರೆಸ್‌ ಪ್ರತಿಭಟನೆ*
ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಸಂಸದ ಡಾ ಕೆ.ಸುಧಾಕರ್‌ ಹಾಗೂ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಕಾಂಗ್ರೆಸ್‌ ಪ್ರತಿಭಟಿಸಿತು.
ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಹಲವು ತಾಸು ರಸ್ತೆ ತಡೆ ನಡೆಸಲಾಯಿತು.
ಹಿಂದೆ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಹಗರಣ, ಅವ್ಯವಹಾರಗಳು ವ್ಯಾಪಕವಾಗಿ ನಡೆದಿದೆ. ಇದಕ್ಕೆ ಸರ್ಕಾರಿ ಕೆಲಸದ ಆಮಿಷಕ್ಕೊಳಗಾಗಿ ಹಣ ಕಳೆದುಕೊಂಡು ಚಾಲಕ ಬಾಬು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ಒಂದು ಉದಾಹರಣೆ. ಪಾರದರ್ಶಕವಾಗಿ ತನಿಖೆ ಕೈಗೊಂಡರೆ ಹಲವು ಪ್ರಕರಣಗಳು ಬಯಲಿಗೆ ಬರುತ್ತವೆ ಎಂದು ಆರೋಪಿಸಿದರು.
ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಹಣವನ್ನು ವಸೂಲಿ ಮಾಡಿದ, ಒಬ್ಬ ಅಮಾಯಕನ ಸಾವಿಗೆ ಕಾರಣವಾದ ಪ್ರಕರಣದ ನೈತಿಕ ಹೊಣೆ ಹೊತ್ತು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿ.ಪಂ.ಮಾಜಿ ಸದಸ್ಯ ಕೆ.ಎಂ.ಮುನೇಗೌಡ, ಮುಖಂಡರಾದ ಮಂಗಳಾ ಪ್ರಕಾಶ್‌, ಡ್ಯಾನ್ಸ್‌ ಶ್ರೀನಿವಾಸ್‌, ಕುಬೇರ್‌ ಅಚ್ಚು, ಚೇತನ್‌ ಮತ್ತಿತರರು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net