ಜಿಲ್ಲಾಡಳಿತ ಭವನದ ಆವರಣದಲ್ಲಿಯೇ ನೌಕರ ಆತ್ಮಹತ್ಯೆ, ಡೆತ್ ನೋಟ್ ನಲ್ಲಿ ಸಂಸದ ಡಾ ಕೆ.ಸುಧಾಕರ್ ಸೇರಿ ಮೂವರ ಹೆಸರು ಪ್ರಸ್ತಾಪ

IMG_20250808_123019.jpg
Published on

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದ ಆವರಣದಲ್ಲಿಯೇ ಹೊರ ಗುತ್ತಿಗೆ ನೌಕರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಡಾ ಕೆ.ಸುಧಾಕರ್‌ ಸೇರಿದಂತೆ ಮೂವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂಬ ಮನವಿಯ ಡೆತ್‌ ನೋಟ್‌ ಪತ್ತೆಯಾಗಿದೆ.
ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಕಚೇರಿಯ ಹೊರಗುತ್ತಿಗೆಯಾಧಾರದ ಚಾಲಕನಾಗಿದ್ದ ಬಾಬು (೩೫) ಮೃತನು. ಗುರುವಾರ ಬೆಳಿಗ್ಗೆ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

*ಸಂಸದರ ವಿರುದ್ಧ ಆರೋಪ*
ಆತ್ಮಹತ್ಯೆಯ ಪ್ರಕರಣದಲ್ಲಿ ಸಂಸದ ಡಾ ಕೆ.ಸುಧಾಕರ್‌, ಇವರ ಬೆಂಬಲಿಗರಾದ ಚಿಕ್ಕಕಾಡಿಗೇನಹಳ್ಳಿಯ ಎನ್‌ ಎನ್‌ ಆರ್‌ ನಾಗೇಶ್‌, ಜಿ.ಪಂ.ಲೆಕ್ಕಾಧಿಕಾರಿ ಕಚೇರಿಯ ಸಹಾಯಕ ಗುಮಾಸ್ತ ಮಂಜುನಾಥ್‌ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

*ಪ್ರಕರಣದ ಹಿನ್ನೆಲೆ*
ನಗರದ ಬಾಪೂಜಿ ನಗರದ ನಿವಾಸಿ ಬಾಬು ಜಿ.ಪಂ.ನಲ್ಲಿ ಹೊರ ಗುತ್ತಿಗೆಯಾಧಾರದ ಮೇಲೆ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ನಿರಂತರವಾಗಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದ. ಇದೇ ವೇಳೆ ಹಣವನ್ನು ಕೊಟ್ಟರೆ ನಾಯಕರ ಮೂಲಕ ಕೆಲಸ ಮಾಡಿಕೊಡುವುದಾಗಿ  ಸಂಸದ ಸುಧಾಕರ್‌ ಬೆಂಬಲಿಗರಾಗಿದ್ದ ಎನ್‌ ಎನ್‌ ಅರ್‌ ನಾಗೇಶ್‌ ಹೇಳಿದ್ದಾರೆ. ಹಾಗೆಯೇ ಜಿ.ಪಂ.ಲೆಕ್ಕ ಸಹಾಯಕ ಮಂಜುನಾಥ್‌ ರನ್ನು ಪರಿಚಯಿಸಿ ಸರ್ಕಾರಿ ಕೆಲಸದ ಭರವಸೆಯೊಂದಿಗೆ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ, ವರ್ಷಗಳು ಕಳೆದರೂ ಮಾತಿನಂತೆ ನಡೆದುಕೊಂಡಿಲ್ಲ. ಹಾಗೆಯೇ ವಾಪಸ್‌ ಕೊಟ್ಟಿಲ್ಲ. ಇದರಿಂದ ಸಾಲಗಾರನಾದ ಹತಾಶೆ ಭಾವನೆಯಲ್ಲಿ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net