ವಿಜಯನಗರ ಸಾಮ್ರಾಜ್ಯದ ಇತಿಹಾಸ ಕುರಿತ ಎಂಪೈರ್ ಆಫ್ ಗಾಡ್ ಕಿಂಗ್ ಕೃತಿ ಬಿಡುಗಡೆ

vijay
Published on

ಬೆಂಗಳೂರು : ಬೇರೆಲ್ಲ ಪುಸ್ತಕಗಳಿಗಿಂತ ಇತಿಹಾಸದ ಪುಸ್ತಕಗಳಿಗೆ ಒಂದು ವಿಶೇಷ ಮಹತ್ವವಿದೆ. ಇತಿಹಾಸದ ಪುಸ್ತಕಗಳು ಕೇವಲ ಪುಸ್ತಕಗಳು ಮಾತ್ರವಲ್ಲ; ಅವು ಪರಂಪರೆಯನ್ನು ಅನಾವರಣ ಮಾಡುವ ಮಹತ್ವದ ಮಾಧ್ಯಮಗಳು ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಚಿರಂಜೀವಿ ಸಿಂಗ್ ತಿಳಿಸಿದ್ದಾರೆ. ಭಾರತೀಯ ವಿದ್ಯಾಭವನದಲ್ಲಿ ಯುವ ಬರಹಗಾರ ತಿರುಮಲ ವೆಂಕಟದೇವರಾಯ ಬರೆದಿರುವ ‘ಇನ್ ದ ಎಂಪೈರ್ ಆಪ್ ದ ಗಾಡ್ ಕಿಂಗ್’ ಎಂಬ ವಿಜಯನಗರ ಸಾಮ್ರಾಜ್ಯದ ಕುರಿತ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕರ್ನಾಟಕವನ್ನಾಳಿದ ರಾಜಮನೆತನಗಳಲ್ಲಿ ವಿಜಯನಗರ ಸಾಮ್ರಾಜ್ಯದ ಪಾತ್ರ ಮಹತ್ವದ್ದು. ವಿಜಯನಗರ ಕಾಲಘಟ್ಟವನ್ನು ಸುವರ್ಣಯುಗ ಎಂದು ಬಣ್ಣಿಸಲಾಗುತ್ತಿತ್ತು. ವಿಜಯನಗರದ ಅರಸತರ ಭಾಷೆ, ಪ್ರದೇಶ, ಜಾತಿ, ಧರ್ಮಗಳನ್ನು ಮೀರಿ ಸೌಹಾರ್ಧತೆಯನ್ನು ಮೈಗೂಡಿಸಿಕೊಂಡು ಆಡಳಿತ ನಡೆಸಿದ್ದರು. ಸರ್ವರಿಗೂ ಸಮಾನ ಅವಕಾಶಗಳನ್ನು ನೀಡಿ ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮ ಎಲ್ಲದಕ್ಕೂ ಆದ್ಯತೆಯನ್ನು ನೀಡಿದ್ದರು. ಇಂತಹ ವಿಜಯನಗರ ಸಂಸ್ಥಾನದ ಕುರಿತು ಪ್ರಕಟಗೊಂಡಿರುವ ಕೃತಿ ಮಹತ್ವದ ಅಂಶಗಳನ್ನು ಒಳಗೊಂಡಿದೆ. ಲೇಖಕರಾದ ತಿರುಮಲ ವೆಂಕಟದೇವ ರಾಯರು ಸ್ವತಃ ವಿಜಯನಗರ ಅರಸರ ವಂಶಸ್ಥರಾಗಿರುವುದರಿಂದ ಕೌಟಂಬಿಕವಾಗಿ ಹೆಚ್ಚಿನ ಮಾಹಿತಿಯನ್ನು ಹೊಂದಿರುತ್ತಾರೆ. ಹಲವು ವಾಸ್ತವ ಅಂಶಗಳನ್ನು ಇಟ್ಟುಕೊಂಡು ಸಂಶೋಧನೆ ಮತ್ತು ಅಧ್ಯಯನದೊಂದಿಗೆ ಕೃತಿ ರಚಿಸಿದ್ದಾರೆ. ಇತಿಹಾಸದ ಕೃತಿಗಳನ್ನು ಬರೆಯುವಾಗ ಬಳಸುವ ಭಾಷೆಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚು ಗಮನ ನೀಡಬೇಕು ಎಂದು ಚಿರಂಜೀವಿ ಸಿಂಗ್ ಕಿವಿಮಾತು ಹೇಳಿದರು.

ಬಿಡುಗಡೆಗೊಂಡಿರುವ ಪುಸ್ತಕ ಮತ್ತು ಇತಿಹಾಸದ ಕುರಿತು ಸಭಿಕರೊಂದಿಗೆ ಲೇಖಕರ ಸಂವಾದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಡಿಜಿಪಿ ಎಸ್.ಮುರುಗನ್, ವಿಜಯನಗರ ರಾಜವಂಶಸ್ಥ, ಕೃಷ್ಣದೇವರಾಯ, ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ.ರಾಘವನ್, ನಿರ್ದೇಶಕ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

"ಯಾವುದೇ ಗ್ರಂಥ ಬರೆದ ನಂತರ ಮತ್ತೆ ಮತ್ತೆ ಓದುವಾಗ ಸ್ವತಃ ಲೇಖಕನಿಗೆ ಅದನ್ನು ಬದಲಿಸಬೇಕೆನಿಸಿದರೆ ಬರಹಗಾರ ಪೌಢಿಮೆ ಹೆಚ್ಚಾಗುತ್ತಿದೆ ಎಂದರ್ಥ. ‘ಇನ್ ದ ಎಂಪೈರ್ ಆಪ್ ದ ಗಾಡ್ ಕಿಂಗ್’ ಕೃತಿ ಎರಡು ವರ್ಷಗಳ ಪರಿಶ್ರಮದಿಂದ ಹೊರಬಂದಿದೆ. ಇನ್ನೂ ಎರಡು ಸಂಪುಟಗಳು ಇದರ ಮುಂದುವರೆದ ಭಾಗವಾಗಿ ಪ್ರಕಟವಾಗಲಿವೆ."  -ತಿರುಮಲ ವೆಂಕಟದೇವರಾಯ, ಲೇಖಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net