

ಕೆರೂರ: ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಸಂತ ಗಾಣಿಗೇರ ಹೇಳಿದರು.
ಹಳಕೋಡ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಹೂಗಳ ಉತ್ಪಾದನಾ ತಾಂತ್ರಿಕತೆ, ಗೋಡಂಬಿ ಬೆಳೆಯ ವೈಜ್ಞಾನಿಕ ಉತ್ಪಾದನೆ ಹಾಗೂ ಸಂಸ್ಕರಣಾ ತಂತ್ರಜ್ಞಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಕಬ್ಬಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅನಕೂಲಕರ ವಾತಾವರಣವಿದೆ. ಯುವ ರೈತರು ಇಲಾಖೆಯಿಂದ ತರಬೇತಿ ಪಡೆದು ಕೃಷಿಯಲ್ಲಿ ಯಶಸ್ಸು ಕಾಣಬೇಕು ಎಂದರು.
ಪುಷ್ಪ ಕೃಷಿ ಪ್ರಾಧ್ಯಾಪಕ ಡಾ. ಸತೀಶ ಪಾಟೀಲ ಮಾತನಾಡಿ, ಸೇವಂತಿಗೆ ಹೂವನ್ನು ಕತ್ತಲು ಮತ್ತು ಬೆಳಕಿನ ವಾತಾವರಣಕ್ಕೆ ಅನುಗುಣವಾಗಿ ಬೆಳೆದರೆ ಹೆಚ್ಚು ಇಳುವರಿ ಪಡೆದುಕೊಳ್ಳಬಹುದು. ಕೀಟನಾಶಕಗಳ ಬದಲಿಗೆ ಜೈವಿಕ ಔಷಧ ಬಳಕೆ ಮಾಡಬೇಕು. ವಿಶ್ವ ವಿದ್ಯಾಲಯಕ್ಕೆ ಹೊಸ ತಳಿಗಳು ಬಂದಿದ್ದು, ರೈತರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಜಯಕುಮಾರ ನಾರಾಯಣಪುರ ಮಾತನಾಡಿ, ಬಂಜರು ಭೂಮಿಯಲ್ಲಿ ಸಹ ರೈತರು ಗೋಡಂಬಿ ಬೆಳೆದು ತೃಪ್ತಿಕರ ಆದಾಯವನ್ನು ಕಂಡುಕೊಳ್ಳಬಹುದು ಎಂದರು.
ತೋಟಾಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಗದೀಶಚಂದ್ರ ಹಿರೇಮಠ, ಸತ್ಯನಾರಾಯಣ, ರಮೇಶ, ಚಂದನ ಕೆ., ಮಹಮ್ಮದ ಫಾರುಕ್, ಗ್ರಾಮ ಪಂಚಾಯಿತಿ ಸದಸ್ಯ ಮುತ್ತಪ್ಪ ಸವದತ್ತಿ, ಅರ್ಜುನ ಗಲಗಲಿ, ಪಡದಯ್ಯ ಹಿರೇಮಠ, ದುರ್ಗಪ್ಪ ಘಟ್ನೂರ, ಮತ್ತಪ್ಪ ಗುರಸಿದ್ದಣ್ಣವರ ಮತ್ತಿತರರಿದ್ದರು.