

ಹಳಿಯಾಳ: ಕೇವಲ ಆಸ್ತಿ, ಹಣ ಗಳಿಕೆಗೆ ಮಾತ್ರ ಆದ್ಯತೆ ನೀಡದೆ, ಉತ್ತಮ ಆರೋಗ್ಯ ಹೊಂದುವುದಕ್ಕೂ ಮಹತ್ವ ನೀಡಬೇಕು. ಉತ್ತಮ, ಸದೃಢ ಆರೋಗ್ಯ ಹೊಂದಿದರೆ ಮಾತ್ರ ಸಂಪತ್ತು ಗಳಿಸಲು ಸಾಧ್ಯ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಇಲ್ಲಿನ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕೆಎಲ್ಇ ವಿಶ್ವವಿದ್ಯಾಲಯದ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ, ವೈದ್ಯಕೀಯ ಸಂಶೋಧನಾ ಕೇಂದ್ರ ಜೆಎನ್ ಮೆಡಿಕಲ್ ಕಾಲೇಜ್ ಬೆಳಗಾವಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಹಳಿಯಾಳ ಮತ್ತು ತಾಲೂಕು ಆಸ್ಪತ್ರೆ ಹಳಿಯಾಳ ಇವರ ಸಹಯೋಗದೊಂದಿಗೆ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಲ್ಲಿ ಬೆಳಗಾವಿ ಕೆಎಲ್ಇಯ ನುರಿತ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆಗೆ ಬೇರೆಡೆ ಶಿಫಾರಸು ಮಾಡಿದರೆ ಅದಕ್ಕೆ ವಿಆರ್‌ಡಿಎಂ ಟ್ರಸ್ಟ್ ಸಹಾಯ ಮಾಡಲಿದೆ ಎಂದರು.
ಕೆಎಲ್ಇ ಕಾಲೇಜ್ ಮೆಡಿಕಲ್ ಡೈರೆಕ್ಟರ್ ಡಾ. ದಯಾನಂದ ಎಂ., ಡಾ. ಅಲ್ಲವಪ್ರಭು, ಸಿಬಿಡಿ ಆರ್ ಸೆಟಿ ನಿರ್ದೇಶಕ ಪ್ರಶಾಂತ ಬಡ್ಡಿ, ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ನಾಯಕ, ಡಾ.ರಮೇಶ ಕದಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ಪ್ರಮುಖರಾದ ಸುಭಾಸ ಕೊರ್ವೆಕರ, ಅಜರ್ ಬಸರೀಕಟ್ಟಿ, ಉಮೇಶ ಬೋಳಶೆಟ್ಟಿ, ವಿನಾಯಕ ಚವ್ಹಾಣ ಇತರರು ಇದ್ದರು. ಶಿಬಿರದಲ್ಲಿ 700 ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು.