

ಪಂಚನಹಳ್ಳಿ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ತಿಮ್ಮಲಾಪುರ ಗ್ರಾಮದಲ್ಲಿ ಮಂಗಳವಾರ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟದ ಯಶಸ್ಸಿಗೆ ಸರ್ಕಾರದ ಜತೆಗೆ ಅನೇಕ ದಾನಿಗಳು ಕೈ ಜೋಡಿಸಿರುತ್ತಾರೆ. ಅವರೆಲ್ಲರನ್ನೂ ಅಭಿನಂದಿಸುತ್ತೇನೆ. ತಾಲೂಕಿನ ಮಕ್ಕಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜನಾಯ್ಕ ಮಾತನಾಡಿ, ಕ್ರೀಡೆಯನ್ನು ಸ್ಪರ್ಧಾ ಭಾವದಿಂದ ಸ್ವೀಕರಿಸಬೇಕು. ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಬಹಳ ಮುಖ್ಯ. ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಬಂದಿರುವ ಮಕ್ಕಳೆಲ್ಲರೂ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿರುವ ಪ್ರತಿಭಾನ್ವಿತರು. ಇಲ್ಲಿ ಮೇಲು-ಕೀಳೆಂಬುದಿಲ್ಲ. ಪ್ರತಿಭೆಗಷ್ಟೇ ಮಾನ್ಯತೆ. ತೀರ್ಪುಗಾರರು ನ್ಯಾಯಯುತ ತೀರ್ಪು ನೀಡಿದರೆ ಕ್ರೀಡಾಕೂಟ ಯಾವುದೇ ಗೊಂದಲವಿಲ್ಲದೆ ಮುಗಿಯುತ್ತದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಸರೋಜಾಬಾಯಿ, ಉಪಾಧ್ಯಕ್ಷ ಲಿಂಗರಾಜು, ಎಸ್‌ಡಿಎಂಸಿ ಅಧ್ಯಕ್ಷ ರಘು, ಬಿಆರ್‌ಸಿ ಬಿ.ಟಿ.ಪ್ರೇಮ್‌ಕುಮಾರ್, ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರೇಗೌಡ, ತಾಲೂಕು ಅಧ್ಯಕ್ಷ ಬಿ.ಪಿ.ಲಿಂಗರಾಜು, ಉಪಾಧ್ಯಕ್ಷ ಕೆ.ಎಂ.ಹರೀಶ್ ಅಗ್ನಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಮಲ್ಲಿಕಾರ್ಜುನ್, ಮುಖಂಡರಾದ ಟಿ.ಎಂ.ದಿನೇಶ್, ಮುಖ್ಯಶಿಕ್ಷಕಿ ಪಿ.ಗೀತಾ, ರಂಗನಾಥ್, ಪಿಡಿಒ ಎಂ.ಬಿ.ಸತೀಶ್, ಎಸ್.ಎಚ್.ಶಶಿಧರ್, ಎ.ಎಸ್.ರಾಜಪ್ಪ ಇದ್ದರು.