

ನಂಜನಗೂಡು: ಬಾಬಾ ಸಾಹೇಬರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು. ಬಾಬಾ ಸಾಹೇಬರು ಒಂದು ವರ್ಗ ಹಾಗೂ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಅಂಬೇಡ್ಕರ್ ಜಯಂತಿಗಳು ಗ್ರಾಮಗಳ ಮಟ್ಟದಲ್ಲಿ ಹೆಚ್ಚಾಗಿ ನಡೆಯುತ್ತಿರಲಿಲ್ಲ. ಆದರೆ ಈಗ ಪ್ರತಿ ಗ್ರಾಮಗಳಲ್ಲೂ ಅದ್ದೂರಿ, ಅರ್ಥಪೂರ್ಣವಾಗಿ ಜಯಂತಿ ಆಚರಿಸುತ್ತಾರೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಮಹನೀಯರ ಚಿಂತನೆ ಮತ್ತು ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಅವರು ಇಡೀ ಭಾರತಕ್ಕೆ ಸಂವಿಧಾನ ಎಂಬ ಮಹಾಗ್ರಂಥ ನೀಡಿದ್ದಾರೆ. ಇಂದು ಅವರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದೆ ಇರಬಹುದು ಸಂವಿಧಾನದ ಮೂಲಕ ಅವರು ಯಾವಾಗಲೂ ಜೀವಂತವಾಗಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾಪಂ ಅಧ್ಯಕ್ಷ ಭಾಗ್ಯಾ ಸ್ವಾಮಿ, ಉಪಾಧ್ಯಕ್ಷ ರತ್ನಮ್ಮ, ಪತ್ರಕರ್ತ ಕೆ.ದೀಪಕ್, ಗ್ರಾಮದ ಮುಖಂಡ ಹುಚ್ಚಯ್ಯ, ಮಹದೇವ್, ಪ್ರಭುಸ್ವಾಮಿ, ಪ್ರೇಮಾ, ಗೌಡಕ್ಕೆ ರಾಜಶೇಖರ ಮೂರ್ತಿ, ಗುರುಸ್ವಾಮಿ, ಬಸವರಾಜು, ಮಾದೇಗೌಡ, ಮಹೇಶ್, ಮಂಜೇಶ, ಮಹದೇವಸ್ವಾಮಿ, ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಸಂಘದ ಸದಸ್ಯರು ಇದ್ದರು.