ವಿದ್ಯಾರ್ಜನೆಗೆ ಒತ್ತು ನೀಡಿ

12 ckm 3
ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಸರ್ಕಾರಿ ನೌಕರರ ಸಂಘದಿAದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ, ಮಂಜುನಾಥ ಸ್ವಾಮಿ, ಎ. ಎಸ್.ದರ್ಶನ್, ಎಚ್. ಆರ್.ಶಿವಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳು ಮುಂದಿನ ಆರು ವರ್ಷಗಳ ಕಾಲ ತಮ್ಮ ಎಲ್ಲ ಅಭಿಲಾಷೆಗಳನ್ನೂ ಬದಿಗಿಟ್ಟು ಒಂದೇ ಮನಸ್ಸಿನಿಂದ ವಿದ್ಯಾರ್ಜನೆ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದಿAದ ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರದ ಉನ್ನತ ಶಿಕ್ಷಣದ ಆರು ವರ್ಷಗಳ ಸಮಯ ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖವಾದ ಘಟ್ಟ. ಆ ಕಾಲ ನಮ್ಮ ಬದುಕನ್ನು ರೂಪಿಸುವ ಕಾಲ. ಆ ಸಂದರ್ಭದಲ್ಲಿ ನಾವು ಆಕರ್ಷಣೆಗಳಿಗೆ ಒಳಗಾಗಿ ಅತ್ತಿತ್ತ ಹೊರಳಿದರೆ ಬದುಕು ಹಾದಿ ತಪ್ಪುತ್ತದೆ. ಆಗ ನಮ್ಮ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳಿಗೆ ಬಹಳಷ್ಟು ಅಭಿಲಾಷೆಗಳಿರುತ್ತವೆ. ಅವುಗಳನ್ನು ಪೂರೈಸಿಕೊಳ್ಳುವ ಸಮಯ ವಿದ್ಯಾರ್ಥಿ ದಿಸೆಯಲ್ಲ. ಉನ್ನತ ಶಿಕ್ಷಣ ಮುಗಿದ ನಂತರ ಅವುಗಳನ್ನು ಈಡೇರಿಸಿಕೊಳ್ಳಬಹುದು. ಹಾಗಾಗಿ ವಿದ್ಯಾರ್ಥಿಗಳು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಬದುಕಿನಲ್ಲಿ ನೆಲೆ ನಿಂತ ನಂತರ ಹೆತ್ತವರನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ನಾವು ಈ ಮಟ್ಟಕ್ಕೆ ಬರಲು ಹೆತ್ತವರ ತ್ಯಾಗ, ಪರಿಶ್ರಮ ಕಾರಣ ಎಂಬುದನ್ನು ಅರಿತು ಅವರನ್ನು ಸಾಕಿ ಸಲಹಬೇಕು ಎಂದು ತಿಳಿಸಿದರು.
ಎ ಟಿ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್ ಮಾತನಾಡಿ, ಇದು ಜ್ಞಾನದ ಯುಗ. ಈ ಜಗತ್ತಿನಲ್ಲಿ ಜ್ಞಾನಕ್ಕೆ ಮಾತ್ರ ಬೆಲೆ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಬರೀ ಅಂಕಗಳಿಕೆಗೆ ಮಾತ್ರ ಸೀಮಿತರಾಗದೇ ಎಲ್ಲ ಕ್ಷೇತ್ರಗಳಲ್ಲೂ, ಎಲ್ಲ ವಿಷಯಗಳಲ್ಲೂ ಜ್ಞಾನವನ್ನು ಬೆಳೆಸಿಕೊಳ್ಳುವ ಜೊತೆಗೆ ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ವೇಳೆ ಪಾಲಕರ ಆರ್ಥಿಕ ಶಕ್ತಿಯನ್ನು, ಅವರ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಆತ್ಮವಿಶ್ವಾಸ, ಶ್ರದ್ಧೆ, ಪರಿಶ್ರಮವನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾವಂತರಾಗುವುದರ ಜೊತೆಗೆ ವಿನಯವಂತರೂ ಆಗಬೇಕು ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಕಳೆದ ೫ ವರ್ಷದ ಅವಧಿಯಲ್ಲಿ ಸಂಘದಿAದ ಜಿಲ್ಲೆಯ ಒಂದೂವರೆ ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಜಿಲ್ಲಾ ಸರ್ಕಾರಿ ನೌಕರರ ಸಂಘ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿರುವ ಜಿಲ್ಲಾ ಸರ್ಕಾರಿ ನೌಕರರ ೨೪೪ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಮಂಜುನಾಥ ಸ್ವಾಮಿ, ಕಾರ್ಯದರ್ಶಿ ಎ. ಎಸ್.ದರ್ಶನ್, ಉಪಾಧ್ಯಕ್ಷ ಎಚ್. ಆರ್.ಶಿವಕುಮಾರ್, ಖಜಾಂಚಿ ಡಾ. ಜಗದೀಶ್, ರಾಜ್ಯ ಪರಿಷತ್ ಸದಸ್ಯ ಎಸ್.ಟಿ.ಪೂರ್ಣೇಶ್, ದೇವಾನಂದ್, ಮೂಡಿಗೆರೆ ತಾಲೂಕು ಅಧ್ಯಕ್ಷ ಪದ್ಮರಾಜ್, ಅಜ್ಜಂಪುರ ತಾಲೂಕು ಅಧ್ಯಕ್ಷ ಈಶ್ವರಪ್ಪ, ಶೃಂಗೇರಿ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಬಿಇಒ ಹೇಮಚಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net