ಕರೊನಾ ನಿಯಂತ್ರಣದೊಂದಿಗೆ ಅಭಿವೃದ್ಧಿಗೆ ಒತ್ತು ನೀಡಿ, ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಇಂಗಿತ

05-Manjunath-HSK-01
Published on

ಹೊಸಕೋಟೆ: ಕರೊನಾ ನಿಯಂತ್ರಣದ ಜತೆಗೆ ತಾಲೂಕಿನ ಅಭಿವೃದ್ಧಿ ಕಾರ್ಯಗಳತ್ತಲೂ ಗಮನ ಹರಿಸಬೇಕು ಎಂದು ಶಾಸಕಶರತ್ ಬಚ್ಚೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಬುಧವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಅಧಿಕಾರಿಗಳು ಸಭೆಯಲ್ಲಿ ಇಲಾಖೆಯ ಸಂಪೂರ್ಣ ಮಾಹಿತಿ ಮಂಡಿಸಲು ಹಾಗೂ ಸೂಕ್ತ ಕ್ರಿಯಾ ಯೋಜನೆಯ ರೋಪುರೇಷೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಮುಂದಿನ ಸಭೆಯಲ್ಲಿ ಇಂಥ ಗೊಂದಲಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಸಿದರು.

ಉತ್ತಮ ಮಳೆ ಭರ್ಜರಿ ಕೃಷಿ: ಜೂನ್ ಅಂತ್ಯದ ವೇಳೆಗೆ ವಾಡಿಕೆಯಂತೆ ಸರಾಸರಿ 287 ಮಿಮೀ ಮಳೆಯಾಗಬೇಕಿದ್ದು, ಈವರೆಗೆ 483 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಶೇ.160 ಹೆಚ್ಚು ಮಳೆಯಾಗಿದೆ, ಇದರಿಂದ ಕೃಷಿ ಚಟುವಟಿಕೆ ಶುರುವಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ವಿ.ನಾಗರಾಜ್ ಮಾಹಿತಿ ನೀಡಿದರು. ಈ ಬಾರಿ ತಾಲೂಕಿನಲ್ಲಿ 7428 ಎಕರೆ ಭೂಮಿಯಲ್ಲಿ ರಾಗಿ700 ಎಕರೆ ಜೋಳ ಹಾಗೂ 87 ಎಕರೆ ತೊಗರಿ ಕೃಷಿಗೆ ಬಿತ್ತನೆ ಬೀಜ ವಿತರಣೆಯಾಗಿದೆ. ಜತೆಗೆ ರಸಗೊಬ್ಬರದ ಕೊರತೆ ಇಲ್ಲವಾಗಿದೆ ಎಂದು ಮಾಹಿತಿ ನೀಡಿದರು.

ಪರಿಹಾರ ಧನ: ಹೂವು, ಹಣ್ಣು, ತರಕಾರಿ ಬೆಳೆಗಾರರು ಕರೊನಾ ಲಾಕ್ ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಪರಿಹಾರ ಹಣವನ್ನು ತಾಲೂಕಿನ 1,300 ರೈತರಿಗೆ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ್ ತಿಳಿಸಿದರು.

ಹಣ ಬಿಡುಗಡೆಗೆ ಕ್ರಮ: ಸರ್ಕಾರದಲ್ಲಿ ಅನುದಾನವಿದೆ. ಅಧಿಕಾರಿಗಳು ಸೂಕ್ತ ಕ್ರಿಯಾ ಯೋಜನೆ ರೂಪಿಸಿದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಾಗುವುದು ಎಂದು ಸಂಸದ ಬಚ್ಚೇಗೌಡ ಹೇಳಿದರು.

ಅಭಿವೃದ್ದಿಯಲ್ಲಿ ಹೊಸಕೋಟೆ ತಾಲೂಕು ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿರಬೇಕು. ಇದಕ್ಕೆ ನಮ್ಮ ಸಹಕಾರ ಇದೆ. ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಕರೊನಾ ಸೊಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಸೇನಾನಿಗಳಿಗೆ ಸರ್ಕಾರದಿಂದ ವಿಮಾ ಯೋಜನೆ ಜಾರಿ ಮಾಡಬೇಕು ಹಾಗೂ ಸಹಾಯಧನವಾಗಿ ಪ್ರತಿ ಕುಟುಂಬಕ್ಕೂ 25 ಸಾವಿರ ಹಣ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಕೃಷ್ಣ ಮೂರ್ತಿ, ವೈಎಸ್‌ಎಂ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯ ಡಿ.ಟಿ. ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net